ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾನಸಿಕ ಒತ್ತಡವೇ ಹಲವು ರೋಗಗಳ ಮೂಲ

Parashurama
Updated On : 29 Jan 2013, 11:57 am

ದೊಡ್ಡಬಳ್ಳಾಪುರ: ಮಾನಸಿಕ ಒತ್ತಡವೇ ಹಲವು ರೋಗಗಳ ಮೂಲವಾಗಿದ್ದು, ಒತ್ತಡ ನಿಗ್ರಹದ ಮೂಲಕ ನಿರೋಗಿಗಳಾಗಿ ಬದುಕಬಹುದು. ಆದರೆ ಸಮಕಾಲೀನ ಸಂದರ್ಭದಲ್ಲಿ ಇದು ದೊಡ್ಡ ಸವಾಲು ಎಂದು ಹಿರಿಯ ಸಾಹಿತಿ, ಆರೋಗ್ಯ ತಜ್ಞ ಡಾ.ಎ.ಎನ್. ನಾಗರಾಜ್ ಅಭಿಪ್ರಾಯಪಟ್ಟರು.
ಇಲ್ಲಿನ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ನಡೆದ  ರೋಗ ನಿವಾರಕ ಜೀವನ ಶೈಲಿ  ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯನ ತಪ್ಪುಗಳನ್ನು ಎತ್ತಿ ತೋರಿಸುವ ಬದಲು ಅದನ್ನು ತಿದ್ದಿ ನಡೆಯಲು ಬೇಕಾದ ಮಾರ್ಗದರ್ಶನ ಮಾಡಿದರೆ ಧನಾತ್ಮಕವಾಗಿ ವ್ಯಕ್ತಿ ಬೆಳೆಯುತ್ತಾನೆ. ತಪ್ಪಿದಲ್ಲಿ ಆತ ಖಿನ್ನತೆಗೆ ಒಳಗಾಗುವ ಅವಕಾಶಗಳೇ ಹೆಚ್ಚು. ಜೊತೆಗೆ ಕನಸುಗಳನ್ನೂ ಕೂಡ ಬದಲಾವಣೆ ಮಾಡಿಕೊಳ್ಳು ಶಕ್ತಿ ಮನಸ್ಸಿಗಿದೆ. ಕನಸನ್ನೂ ಹತೋಟಿಯಲ್ಲಿಡುವ ಸಾಮರ್ಥ್ಯ ನಿಶ್ಚಲ ಮನೋಭಾವಕ್ಕಿರುತ್ತದೆ. ಹೆದರಿಕೆ ಮನುಷ್ಯನನ್ನು ಯಶಸ್ಸಿನಿಂದ ದೂರಕ್ಕೆ ಕರೆದೊಯ್ಯುತ್ತದೆ ಎಂದರು.
ಸಮಸ್ಯೆ: ಆರೋಗ್ಯ ವಿಜ್ಞಾನ, ವ್ಯಾಯಾಮ ವಿಜ್ಞಾನ ಮತ್ತು ಮನಃಶಾಸ್ತ್ರ ಹೇಳುವಂತೆ ಜೀವನಶೈಲಿಯ ಬದಲಾವಣೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆಧುನಿಕ ವಿಜ್ಞಾನ ಹೇಳುವಂತೆ ಪ್ರಾಕೃತಿಕ ಆಹಾರ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಗಳೇ ರೋಗಗ್ರಸ್ತ ಸಮಾಜ ಸೃಷ್ಟಿಗೊಳ್ಳಲು ನಿಜವಾದ ಕಾರಣ. ಪ್ರಕೃತಿಯಲ್ಲಿ ಬೆಳೆವ ಆಹಾರವನ್ನು ಮಾರ್ಪಾಟುಗಳಿಲ್ಲದೆ ತಿನ್ನುವ ಪ್ರಾಣಿಗಳು ನಿರೋಗಿಗಳಾಗಿರುತ್ತವೆ. ಆದರೆ ರುಚಿಗೆ ಒತ್ತುಕೊಡುವ ಮನುಷ್ಯ ಹಲವು ರೋಗಗಳಿಗೆ ತುತ್ತಾಗುತ್ತಾನೆ. ನಿರಗ್ನಿ ಆಹಾರ ಹಲವು ಕಾಯಿಲೆಗಳ ನಿವಾರಣೆಗೆ ಸಂಜೀವಿನಿ ಎಂದು ಅವರು ವಿವರಿಸಿದರು.
ಹಸುವಿನ ಹಾಲು ನಮಗೆ ಮಾಡಿದ್ದಲ್ಲ. ಹಸುವಿನ ಹಾಲಿನಲ್ಲಿ ಶೇ.15ರಷ್ಟು ಕೊಬ್ಬಿನ ಅಂಶವಿದ್ದರೆ ತಾಯಿಯ ಎದೆಹಾಲಿನಲ್ಲಿ ಶೇ.5ರಷ್ಟು ಮಾತ್ರ ಕೊಬ್ಬಿನ ಅಂಶ ಇರುತ್ತದೆ ಎಂದ ಅವರು ಮಿತಿಮೀರಿದ ಮಾಂಸಾಹಾರ ಕ್ಯಾನ್ಸರ್‌ನ ಮೂಲ ಎಂಬುದು ಅಮೆರಿಕಾದಲ್ಲಿ ಸಾಬೀತಾಗಿದೆ. ಅದೇನೇ ಇದ್ದರೂ ನಿಯಮಿತ ಪ್ರಮಾಣದ ವ್ಯಾಯಾಮ ಪದ್ಧತಿಗಳನ್ನು ರೂಡಿಸಿಕೊಳ್ಳುವುದು ಆರೋಗ್ಯದ ಹಿತದೃಷ್ಟಿಯಲ್ಲಿ ಉತ್ತಮವಾದ ಆಲೋಚನೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ಬರೆದಿರುವ ರೋಗ ನಿವಾರಕ ಜೀವನ ಶೈಲಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಹೋಲಿಸ್ಟಿಕ್ ಲೈಫ್ ಸ್ಟೈಲ್ ಆಫ್ ಹೀಲಿಂಗ್ ಪುಸ್ತಕಗಳ ಕುರಿತು ವಿಶೇಷ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ.ಎನ್.ರಾಮಚಂದ್ರರಾವ್ ಮಾತನಾಡಿದರು. ಕೊಂಗಾಡಿಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ನಾರಾಯಣನ್, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ, ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ರಾಮಣ್ಣ, ಪ್ರೊ.ನಿಜಲಿಂಗಪ್ಪ, ಪ.ಪೂ.ಕಾಲೇಜು ಪ್ರಾಂಶುಪಾಲ ಮೇಜರ್ ಮಹಾಬಲೇಶ್ವರ್, ಉಪಪ್ರಾಂಶುಪಾಲ ಎಸ್.ರಾಜಲಕ್ಷ್ಮಿ, ದೈ.ಶಿಕ್ಷಣ ನಿರ್ದೇಶಕ ಸಂಜೀವಕುಮಾರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments