ಸಾಲ ವಸೂಲಾತಿಗೆ ಬಂದ ಮಹಿಳೆ ಹತ್ಯೆ
ಕನಕಪುರ/ರಾಮನಗರ: ಕೊಟ್ಟ ಸಾಲ ವಸೂಲಾತಿಗೆ ಬಂದ ಮಹಿಳೆಯನ್ನು ಹತ್ಯೆಗೈದು, ಶವವನ್ನು ತನ್ನ ಮನೆಯಲ್ಲೇ ಬಚ್ಚಿಟ್ಟಿದ್ದ ಸಾಲಗಾರ್ತಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಕನಕಪುರ ತಾಲೂಕಿನ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಗ್ರಾಮದ ಚಿಕ್ಕದೇವಮ್ಮ(60) ಕೊಲೆಯಾದ ದುರ್ದೈವಿ. ತಾನು ಪಡೆದಿದ್ದ ಸಾಲ ಹಿಂತಿರುಗಿಸುವುದಾಗಿ ಹೇಳಿ ಚಿಕ್ಕದೇವಮ್ಮ ಅವರನ್ನು ತನ್ನ ಮನೆಗೆ ಕರೆಸಿಕೊಂಡು, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಅದೇ ಗ್ರಾಮದ ಉಮಾಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಘಟನೆ ವಿವರ: ಚಿಕ್ಕದೇವಮ್ಮ ಅವರಿಂದ ಉಮಾ 2 ವರ್ಷದ ಹಿಂದೆ 25 ಸಾವಿರ ಸಾಲ ಪಡೆದಿದ್ದಳು. ಸಾಲ ಬಾಕಿ ಉಳಿಸಿಕೊಂಡ ಉಮಾ ಸರಿಯಾಗಿ ಬಡ್ಡಿಯನ್ನೂ ಪಾವತಿಸುತ್ತಿರಲಿಲ್ಲ. ಸಾಲದ ಹಣ ಪಾವತಿ ಮಾಡಬೇಕೆಂದು ಚಿಕ್ಕದೇವಮ್ಮ ಒತ್ತಡ ಹೇರಿದ್ದರು.
ಉಮಾ ಸೋಮವಾರ ಬೆಳಗ್ಗೆ ಚಿಕ್ಕದೇವಮ್ಮ ಅವರ ಮೊಬೈಲ್‌ಗೆ ಕರೆ ಮಾಡಿ, ಹಣ ಪಡೆದುಕೊಳ್ಳಲು ಸಂಜೆ ನಂತರ ತನ್ನ ಮನೆಗೆ ಬರುವಂತೆ ತಿಳಿಸಿದ್ದಳು. ಅದರಂತೆ ಚಿಕ್ಕದೇವಮ್ಮ ಹೊತ್ತು ಮುಳುಗಿದ ಮೇಲೆ ಉಮಾ ಮನೆಗೆ ತೆರಳಿದ್ದಳು. ಬಳಿಕ ಮನೆಗೆ ವಾಪಸ್ಸಾಗಿರಲಿಲ್ಲ.
ಚಾಲಾಕಿ ಕೊಲೆಗಾರ್ತಿ: ಉಮಾ ಕರೆ ಮಾಡಿದ್ದ ವಿಷಯ ಚಿಕ್ಕದೇವಮ್ಮ ಮನೆಯವರಿಗೂ ತಿಳಿದಿತ್ತು. ರಾತ್ರಿಯಾದರೂ ಚಿಕ್ಕದೇವಮ್ಮ ಮನೆಗೆ ವಾಪಸ್ಸಾಗದಿದ್ದಾಗ ಕುಟುಂಬದವರು ಆತಂಕಗೊಂಡು ಗ್ರಾಮಸ್ಥರೊಂದಿಗೆ ಉಮಾ ಮನೆಗೆ ಹೋಗಿ ತಪಾಸಣೆ ಮಾಡಿದ್ದರಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಕಡೆಗೆ, ಚಿಕ್ಕದೇವಮ್ಮ ಕಾಣೆಯಾಗಿರುವ ಬಗ್ಗೆ ಕುಟುಂಬದವರು ಸೋಮವಾರ ರಾತ್ರಿಯೇ ಸಾತನೂರು ಪೊಲೀಸರಿಗೆ ದೂರು ನೀಡಿದರು. ಗ್ರಾಮಸ್ಥರೊಡಗೂಡಿ ಪೊಲೀಸ್ ಸಿಬ್ಬಂದಿಯು ಉಮಾ ಮನೆಗೆ ತೆರಳಿ ಜಾಲಾಡಿದರೂ ಚಿಕ್ಕದೇವಮ್ಮ ಪತ್ತೆಯಾಗಿರಲಿಲ್ಲ.
ಪಿಎಸ್‌ಐ ಶೋಧ: ಚಿಕ್ಕದೇವಮ್ಮ ಕಾಣೆ ಪ್ರಕರಣ ಕಗ್ಗಂಟಾದ ಹಿನ್ನೆಲೆಯಲ್ಲಿ ಸಾತನೂರು ಸಬ್
ಇನ್ಸ್‌ಪೆಕ್ಟರ್ ಸತೀಶ್ ಚಿಕ್ಕೇಗೌಡನದೊಡ್ಡಿಗೆ ತೆರಳಿ, ಉಮಾ ಮನೆಯನ್ನು ಶೋಧಿಸಿದರು. ಮನೆಯಲ್ಲಿ ರಾಶಿ ಹಾಕಿದ್ದ ಹಿಪ್ಪುನೇರಳೆ ಸೊಪ್ಪನ್ನು ಪಕ್ಕಕ್ಕೆ ಸರಿಸಿ ನೋಡಲಾಗಿ ಅಲ್ಲಿ ಚಿಕ್ಕದೇವಮ್ಮ ಶವ ಪತ್ತೆಯಾಯಿತು. ತಕ್ಷಣವೇ ಆರೋಪಿ ಉಮಾಳನ್ನು ಬಂಧಿಸಲಾಯಿತು.
ಚಿಕ್ಕದೇವಮ್ಮ ಕುತ್ತಿಗೆಯನ್ನು ಹಗ್ಗದಿಂದ ಬಿರಿದು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹತ್ಯೆಗೆ ಬೇರೆ ಯಾರಾದರೂ ಸಹಕರಿಸಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಎಸ್ಪಿ ಅನುಪಮ್ ಅಗ್ರವಾಲ್ ಭೇಟಿ ನೀಡಿದ್ದರು. ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.