ಆಹಾರ ಧಾನ್ಯ ಸಂಗ್ರಹಣೆಗೆ ಮಿತಿ ನಿಗದಿ
ರಾಮನಗರ: ಆಹಾರ ಧಾನ್ಯಗಳ ಅಕ್ರಮ ದಾಸ್ತಾನು, ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆಗೆ ಮಿತಿ ನಿಗದಿಪಡಿಸಲಾಗಿದೆ. ಅಂತೆಯೇ ಅಗತ್ಯ ವಸ್ತುಗಳ ದಾಸ್ತಾನಿಗೆ ಪರವಾನಗಿ ಪಡೆದುಕೊಳ್ಳಲು ಸ್ಪಷ್ಟ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಅಕ್ಕಿ ಸೇರಿದಂತೆ ಅಗತ್ಯ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪರವಾನಗಿ ಹೊಂದಿಲ್ಲದ, ಮಿತಿಗಿಂತ ಹೆಚ್ಚು ಆಹಾರ ಧಾನ್ಯಗಳ ದಾಸ್ತಾನಿಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಎಚ್ಚರಿಸಿದ್ದಾರೆ.
ದ್ವಿದಳ ಧಾನ್ಯಗಳು, ಖಾದ್ಯ ತೈಲ, ಖಾದ್ಯ ತೈಲ ಬೀಜ, ಅಕ್ಕಿ ದಾಸ್ತಾನನ್ನು ಚಿಲ್ಲರೆ ಮಾರಾಟಗಾರರಿಗೆ 5 ಕ್ವಿಂಟಾಲ್ ನಿಗದಿಪಡಿಸಲಾಗಿದೆ. ಬಹು ಚಿಲ್ಲರೆ ಮಾರಾಟಗಾರರು ದ್ವಿದಳ ಧಾನ್ಯಗಳನ್ನು 100 ಕ್ವಿಂಟಾಲ್ ಮತ್ತು ಇತರೆ ಧಾನ್ಯಗಳಣ್ನು 150 ಕ್ವಿಂಟಾಲ್ ದಾಸ್ತಾನಿಟ್ಟುಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ಸಗಟು ಮಾರಾಟಗಾರರು ದ್ವಿದಳ ಧಾನ್ಯಗಳು, ಖಾದ್ಯ ತೈಲ ಬೀಜ ಹಾಗೂ ಅಕ್ಕಿಯನ್ನು ತಲಾ 2 ಸಾವಿರ ಕ್ವಿಂಟಾಲ್, ಖಾದ್ಯ ತೈಲವನ್ನು 1200 ಕ್ವಿಂಟಾಲ್ ಮತ್ತು ಭತ್ತವನ್ನು 3 ಸಾವಿರ ಕ್ವಿಂಟಾಲ್ ದಾಸ್ತಾನಿಟ್ಟುಕೊಳ್ಳಲು ಅನುಮತಿ ಇದೆ ಎಂದು ಶ್ರೀರಾಮರೆಡ್ಡಿ ಹೇಳಿದ್ದಾರೆ.
ಅಕ್ಕಿ ಗಿರಣಿಗಳಲ್ಲಿ ಹಿಂದಿನ 2 ವರ್ಷಗಳಲ್ಲಿ ಅತಿ ಹೆಚ್ಚು ವಹಿವಾಟು ನಡೆದ ಒಂದು ತಿಂಗಳಿನ ಪ್ರಮಾಣದಷ್ಟು ದಾಸ್ತಾನಿರಿಸಿಕೊಳ್ಳಬಹುದು. ಹೊಸ ಗಿರಣಿಗಳಲ್ಲಿ ಮೊದಲ ವರ್ಷಕ್ಕೆ ಪ್ರಸ್ತಾಪಿತ ಸಾಮರ್ಥ್ಯದ ಶೇಕಡ 75ರಷ್ಟು ಪ್ರಮಾಣದ ದಾಸ್ತಾನು ಹೊಂದಬಹುದು ಎಂದಿದ್ದಾರೆ.
ಪರವಾನಗಿ ಕಡ್ಡಾಯ: ಅಗತ್ಯ ವಸ್ತು ಕಾಯ್ದೆ ಆದೇಶ 1986ರ ಅನ್ವಯ ಮಾರಾಟಗಾರರಿಗೆ ಪರವಾನಗಿ ಕಡ್ಡಾಯವಾಗಿದೆ. ಎಲ್ಲಾ ಸಗಟು ಮಾರಾಟಗಾರರು, ಅಕ್ಕಿ ಗಿರಣಿ ಮಾಲೀಕರು ಜಿಲ್ಲಾಧಿಕಾರಿಯಿಂದ, ಚಿಲ್ಲರೆ ಮಾರಾಟಗಾರರು ಆಯಾ ತಾಲೂಕಿನ ತಹಸೀಲ್ದಾರರಿಂದ ಒಂದು ವಾರದೊಳಗಾಗಿ ಪರವಾನಗಿಯನ್ನು ಪಡೆಯಬೇಕು ಎಂದು ಶ್ರೀರಾಮರೆಡ್ಡಿ ಸೂಚಿಸಿದ್ದಾರೆ.