ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಕ್ಕಲಮಡಗು ಜಪ ಬಿಟ್ಟು ಹೇಮಾವತಿ ಮಂತ್ರ

Rashmi Kasaragodu
Updated On : 1 Feb 2013, 11:09 am

ದೊಡ್ಡಬಳ್ಳಾಪುರ: ದಶಕದಿಂದ ನೆನೆಗುದಿಗೆ ಬಿದ್ದಿರುವ ಜಕ್ಕಲಮಡಗು ಕುಡಿಯುವ ನೀರಿನ ಯೋಜನೆ ಇನ್ನೂ ಮರೀಚಿಕೆಯಾಗಿದೆ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಒಂದೇ ಒಂದು ಹನಿ ನೀರು ಬಂದಿಲ್ಲ. ಹೀಗಿರುವಾಗ ದೊಡ್ಡಬಳ್ಳಾಪುರದ ಜನರ ಕುಡಿಯುವ ನೀರಿನ ದಾಹ ತಣಿಸಲು ಸ್ಥಳೀಯ ಶಾಸಕ ಜೆ.ನರಸಿಂಹಸ್ವಾಮಿ ಮತ್ತೊಂದು ದೊಡ್ಡ ಭರವಸೆಯ ಗೋಪುರ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಇಲ್ಲಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ತುಮಕೂರಿನವರೆಗೆ ಬಂದಿರುವ ಹೇಮಾವತಿ ನದಿ ನೀರನ್ನು ದೊಡ್ಡಬಳ್ಳಾಪುರಕ್ಕೆ ಹರಿಸಿ ತಾಲೂಕಿನ ಕೆರೆಗಳನ್ನು ತುಂಬಿಸಲು ನುರಿತ ನೀರಾವರಿ ಎಂಜಿಯರುಗಳಿಂದ ಸರ್ವೇ ಮಾಡಿಸಲಾಗುವುದು. 150 ಕೋಟಿ ರು. ಖರ್ಚು ಮಾಡಿದರೆ ಮುಂದಿನ ಎರಡೇ ವರ್ಷದಲ್ಲಿ ತಾಲೂಕಿಗೆ ನೀರು ಬರಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೇಮಾವತಿ ನೀರನ್ನು ದೊಡ್ಡಬಳ್ಳಾಪುರಕ್ಕೆ ತರುವುದೇ ನನ್ನ ಗುರಿ ಎಂದು ಘೋಷಿಸಿದ್ದಾರೆ. ಇದು ಈಗ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಇಚ್ಛಾಶಕ್ತಿಯೂ ಬೇಕು: ಜಕ್ಕಲಮಡಗು ಬಂದೇ ಬರುತ್ತದೆ, ದೊಡ್ಡಬಳ್ಳಾಪುರದ ಜನರ ದಾಹ ತಣಿಯುತ್ತದೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಿದ್ದ ಶಾಸಕರ ಬಾಯಲ್ಲಿ ಈಗ ಅದರ ಪ್ರಸ್ತಾಪವಿಲ್ಲದೇ ಹೇಮಾವತಿ ಮಹತ್ವಾಕಾಂಕ್ಷೆ ಹುಟ್ಟಿರುವುದು ಮತ್ತೊಂದು ಭರವಸೆಯ ಆಶಾಗೋಪುರವಾಗದಿರಲಿ. ಹೇಳುವ ಮಾತು ಕಾರ್ಯರೂಪಕ್ಕೆ ಬರಲಿ. ಈಗಾಗಲೇ ಜಕ್ಕಲಮಡಗು ಯೋಜನೆಗೆ ಸುಮಾರು 36 ಕೋಟಿಗೂ ಹೆಚ್ಚು ಹಣ ಸುರಿಯಲಾಗಿದೆ. ಆದರೆ ದೊಡ್ಡಬಳ್ಳಾಪುರಕ್ಕೆ ಸಿಕ್ಕ ಲಾಭ ಮಾತ್ರ ದೊಡ್ಡ ಶೂನ್ಯ. ಈ ನಿಟ್ಟಿನಲ್ಲಿ ನೀರಿನ ವಿಚಾರದಲ್ಲಿ ಕೈಗೊಳ್ಳುವ ಯೋಜನೆಗೆ ಪೂರಕವಾಗಿ ಯೋಜನೆ ಮತ್ತು ಅನುಷ್ಠಾನದ ಇಚ್ಛಾಶಕ್ತಿಯೂ ಬೇಕಾಗುತ್ತದೆ ಎಂಬುದು ಜನಾಭಿಪ್ರಾಯ.ಪ್ರಯೋಜನವಾಗಿಲ್ಲ: ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಯಾಗಿ ಚಾಲನೆಗೊಂಡ ಜಕ್ಕಲ ಮಡಗು ಯೋಜನೆಗೆ ಬರೋಬ್ಬರಿ 10 ವರ್ಷಗಳೇ ಸಂದರೂ ನಯಾಪೈಸೆ ಪ್ರಯೋಜನ ಜನರಿಗಾಗಿಲ್ಲ. ಈಗಾಗಲೇ ದೊಡ್ಡಬಳ್ಳಾಪುರದ ಜನ ಕಡ್ಡಾಯವಾಗಿ ಕುಡಿಯುವ ನೀರನ್ನು ಖಾಸಗಿಯವರಿಂದ ಕೊಂಡುಕೊಳ್ಳುವಂತಾಗಿದೆ. ನಗರಸಭೆಯಂತೂ ನೀರು ಪೂರೈಕೆಯ ಹೊಣೆಗಾರಿಕೆಯನ್ನು ಭಾಗಶಃ ಮರೆತೇ ಬಿಟ್ಟಿದೆ. ನಗರ ವ್ಯಾಪ್ತಿಯಲ್ಲಿ ನಗರಸಭೆಯ ಬಹುತೇಕ ಬೋರ್‌ವೆಲ್‌ಗಳು ಬತ್ತಿಹೋಗಿದ್ದು, ನೀರಿನ ಲಭ್ಯತೆಯೇ ಇಲ್ಲವಾಗಿದೆ. ಈ ಹಂತದಲ್ಲಿ ನಡೆಯಬೇಕಾದ್ದ ಪ್ರಾಮಾಣಿಕ ಪ್ರಯತ್ನವಂತೂ ಇಲ್ಲಿಯವರೆಗೆ ನಡೆದಿಲ್ಲ.
ಕೇವಲ ತಾತ್ಕಾಲಿಕ ಪರಿಹಾರಗಳ ಕುರಿತಷ್ಟೇ ಯೋಚಿಸುವ ಆಡಳಿತ ಯಂತ್ರ, ಜನಪ್ರತಿನಿಧಿಗಳು ದೂರದರ್ಶಿ ದೃಷ್ಟಿಕೋನವನ್ನು ಹೊಂದಬೇಕು. ತನ್ಮೂಲಕ ಜನರ ನೀರಿನ ದಾಹ ತಣಿಸಲು ಮುಂದಾಗಬೇಕೇ ಹೊರತು ಕೇವಲ ಬಾಯಿಮಾತಿನಲ್ಲಿ ಯಾವ ಸಮಸ್ಯೆಯೂ ಬಗೆ ಹರಿಯದು.ಭರವಸೆ ಬಿಡಿ: ಕೇವಲ ಭರವಸೆಗಳಿಂದ ದಾಹ ತಣಿಯುವುದಿಲ್ಲ. ನೀರಿನ ಬರ ತೀವ್ರವಾಗಿರುವ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಜನರಿಗೆ ಕನಿಷ್ಠ ಬಳಕೆಗಾದರೂ ನೀರನ್ನು ಪೂರೈಕೆ ಮಾಡಲೇಬೇಕು. ಅದು ಸಂವಿಧಾನಬದ್ಧವಾದ ನ್ಯಾಯ. ಟ್ಯಾಂಕರ್‌ಗಳ ಮೂಲಕವಾದರೂ ನಮಗೆ ನೀರು ಕೊಡಿ ಎಂದು ಪದೇ ಪದೇ ನಗರಸಭೆ ಮುಂದೆ ಮುತ್ತಿಗೆ ಹಾಕುವ ಜನರ ಗೋಳೂ ಕೇಳುವವರಿಲ್ಲದ ಸಂದರ್ಭದಲ್ಲಿ ಮತ್ತೊಂದು ಮೂಲದಿಂದ ನೀರು ಬರುತ್ತೆ ಎಂದು ಹೇಳಿ ಆಶಾವಾದ ಮೂಡಿಸುವ ಬದಲು, ಇರುವ ಯೋಜನೆ ಯಾವ ಹಂತದಲ್ಲಿದೆ ಎಂಬುದರ ಸ್ಪಷ್ಟ ಚಿತ್ರಣ ಅರಿತು ಇರುವ ಗೊಂದಲಗಳ ನಿವಾರಣೆಗೆ ಮಾರ್ಗೋಪಾಯಗಳನ್ನು ಹುಡುಕಬೇಕಿದೆ.
ನೀರು ಕೊಡ್ತಾರಾ: ಜಕ್ಕಲ ಮಡಗು ಜಲಾಶಯ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ. ಆದರೆ ಅದರ ಸಂಪೂರ್ಣ ಜಲಾನಯನ ಪ್ರದೇಶ ಬರುವುದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ. ಅಲ್ಲಿ ಸಂಗ್ರಹವಾಗುವ ನೀರನ್ನು ದೊಡ್ಡಬಳ್ಳಾಪುರಕ್ಕೆ ಕೊಡಲು ಚಿಕ್ಕಬಳ್ಳಾಪುರದ ಜನ ಒಪ್ಪಲಿಲ್ಲ. ಪ್ರಕರಣ ದಾಯಾದಿ ಕಲಹಕ್ಕೂ ಸಾಕ್ಷಿಯಾಗಿತ್ತು. ಈ ಹಂತದಲ್ಲಿ ಬಂದ ಸಮನ್ವಯ ಸೂತ್ರ ದೊಡ್ಡಬಳ್ಳಾಪುರಕ್ಕೆ ದೊಡ್ಡ ನಷ್ಟವನ್ನೇ ಭರಿಸಿದೆ. ಚಿಕ್ಕಬಳ್ಳಾಪುರದ ಅಗತ್ಯತೆಯನ್ನೂ ಮೀರಿದ ನೀರನ್ನಷ್ಟೇ ದೊಡ್ಡಬಳ್ಳಾಪುರಕ್ಕೆ ಕೊಡಬಹುದು. ಜೊತೆಗೆ ಈ ಹಂತದಲ್ಲಿ ನೀರಿನ ಲಭ್ಯತೆ ಕೂಡ ಆಶಾದಾಯವಾಗಿಲ್ಲ. ಹೀಗಾಗಿ ಕೊಡಲು ಸಾಧ್ಯವಿಲ್ಲ ಎಂಬ ಚಿಕ್ಕಬಳ್ಳಾಪುರ ನಗರಸಭೆಯ ಮಾತನ್ನೂ ತಳ್ಳಿಹಾಕುವಂತಿಲ್ಲ. ಹೀಗಿರುವಾಗ ದೊಡ್ಡಬಳ್ಳಾಪುರಕ್ಕೆ ಜಕ್ಕಲಮಡಗು ನೀರು ಬರುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಈ ಹಂತದಲ್ಲಿ ಸ್ಥಳೀಯ ಶಾಸಕರು, ಸಂಸದರು, ಅಧಿಕಾರಿಗಳು, ಜನಪ್ರತಿನಿಧಿಗಳು ಸುಮಾರು 40 ಕೋಟಿಯಷ್ಟು ದೊಡ್ಡ ಮೊತ್ತ ನುಂಗಿರುವ ಜಕ್ಕಲಮಡಗು ದೊಡ್ಡಬಳ್ಳಾಪುರಕ್ಕೆ ಪ್ರಯೋಜನಕಾರಿಯಾಗಿ ಪರಿಣಮಿಸುವಂತೆ ಆಲೋಚಿಸಬೇಕು. ಪ್ರಾಮಾಣಿಕ ಪ್ರಯತ್ನವನ್ನು ಮಾಡಲೇಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement