ಆಳುವ ವರ್ಗದಿಂದ ಕಾರ್ಮಿಕರಿಗೆ ಸಂಕಷ್ಟ: ಮೀನಾಕ್ಷಿ ಸುಂದರಂ
ನೆಲಮಂಗಲ: ಸರ್ಕಾರದ ನೀತಿಗಳಿಂದ ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ಬಡವರು ಬಡವರಾಗಿಯೇ ಉಳಿದುಕೊಂಡಿದ್ದಾರೆ. ಆಳುವ ವರ್ಗದಿಂದ ಇಂದು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಸಿ ಐಟಿಯುನ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.
ಅವರು ಸೋಮವಾರ ತಾಲೂಕಿನ ದಾಬಸ್ಪೇಟೆಯಲ್ಲಿ ಸಿಐಟಿಯುನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಾ ದುಡಿಯುವ ಜನರ ಬದುಕಿನ ಬವಣೆ ನೀಗಿಸಲು ಅವರ ದಿನನಿತ್ಯದ ಬೇಡಿಕೆಗಳನ್ನು ಈಡೇರಿಸಲು ಹೋರಾಡಬೇಕಿದೆ. ಸಂಘಟಿತ ಕಾರ್ಮಿಕರ ಹಕ್ಕುಗಳು, ಬೋನಸ್, ಪಿಎಫ್, ಗ್ರಾಚ್ಯುಟಿಯಂತ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸಬೇಕಿದೆ. ಇದರ ಜೊತೆಗೆ ರೈತರು ಬೆಳೆಯುವ ಬೆಳೆಗೆ ಬೆಲೆಯನ್ನು ನಿಗದಿ ಪಡಿಸಲು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕಿನ ಸಿಐಟಿಯುನ ಗೌರವಾಧ್ಯಕ್ಷ ಆರ್. ಸುರೇಶ್ ಮಾತನಾಡುತ್ತಾ ದಾಬಸ್ಪೇಟೆ ಕೈಗಾರಿಕ ಪ್ರದೇಶಗಳಲ್ಲಿ ಈ ಭಾಗದ ವಿದ್ಯಾವಂತರಿಗೆ ಉದ್ಯೋಗ ನೀಡಲು ಮೀನಮೇಷ ಮಾಡುತ್ತಿದೆ. ಹಾಗೆಯೇ ಎಲ್ಲಾ ಕಾರ್ಮಿಕರಿಗೂ ಕನಿಷ್ಠ 15,000 ರು.ವೇತನ ನೀಡಬೇಕು. ದುಡಿಯುವ ವರ್ಗವನ್ನು ರಕ್ಷಿಸಲು ಕಾರ್ಮಿಕ ವರ್ಗ ಪಣತೊಡಬೇಕು ಎಂದು ತಿಳಿಸಿದರು.
ಕರ್ನಾಟಕ ಪ್ರಾಂತಿ ರೈತ ಸಂಘದ ಕಾರ್ಯದರ್ಶಿ ಚಂದ್ರುತೇಜಸ್ವಿ, ಸಿಐಟಿಯುನ ರಾಜ್ಯ ಸಹ ಕಾರ್ಯದರ್ಶಿ ಎನ್.ಪ್ರತಾಪ್ಸಿಂಹ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ. ದಯಾನಂದ್, ಖಜಾಂಚಿ ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ಕೆ.ಎಸ್.ತಿರುಮಲಚಾರ್, ಉಪಾಧ್ಯಕ್ಷ ಆನಂದ್, ಟಿ.ಡಿ.ಪಿ.ಎಸ್ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ್, ಎಲ್.ಎಮ್. ವಿಂಡ್ಪವರ್ ಉಪಾಧ್ಯಕ್ಷ ಸುರೇಶ್, ಡೆನ್ಸೊ ಕಾರ್ಮಿಕ ಸಂಘದ ಬಸವರಾಜು ಇದ್ದರು.