ಕಂದಾಯ ಇಲಾಖೆ ಅಧಿಕಾರಿಗಳ ಲೋಪ: ರೈತರಿಗೆ ಸಮಸ್ಯೆ
ಚನ್ನಪಟ್ಟಣ: ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳ ಲೋಪದಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು ಈ ಬಗ್ಗೆ ಗಮನಹರಿಸಿ ಕಂದಾಯ ಇಲಾಖೆಗೆ ಚುರುಕು ಮೂಡಿಸುವಂತೆ ರಾಜ್ಯ ರೈತಸಂಘದ ಪದಾಧಿಕಾರಿಗಳು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ರನ್ನು ಒತ್ತಾಯಿಸಿದರು.
ಕಾರ್ಯನಿಮಿತ್ತ ಮೈಸೂರಿಗೆ ತೆರಳುತ್ತಿದ್ದ ಸಚಿವರನ್ನು ಪ್ರವಾಸಿ ಮಂದಿರದ ಬಳಿ ಭೇಟಿ ಮಾಡಿದ ರೈತ ಸಂಘದ ಪದಾಧಿಕಾರಿಗಳು, ಜಿಲ್ಲೆಯ ನಾಲ್ಕು ತಾಲೂಕಿನ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರೈತರಿಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಸಾಕಷ್ಟು ಕೆಲಸಕಾರ್ಯಗಳು ಬಾಕಿ ಉಳಿದಿದ್ದು ರೈತರು ತಾಲೂಕು ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಆರೋಪಿಸಿದರು.
ಸಕಾಲ ಯೋಜನೆಯನ್ನು ಜಾರಿಗೆ ತರಲಾಗಿದೆಯಾದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಕಾರ್ಯಗಳಾಗುತ್ತಿಲ್ಲ, ವಿನಾಕಾರಣ ಕಚೇರಿಗಳಿ ಅಲೆದಾಡಿಸಿ ರೈತರನ್ನು ಸುಲಿಗೆ ಮಾಡಲಾಗುತ್ತಿದೆ, ಗ್ರಾಮಲೆಕ್ಕಾಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇಲ್ಲವಾಗಿದ್ದು ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ ಎಂದು ಸಚಿವರಿಗೆ ಮನದಟ್ಟು ಮಾಡಿ ಕೊಟ್ಟರು.
ಪಹಣಿಯಲ್ಲಿ ಬೆಳೆ ನಮೂದಿಸಿ: ಜಿಲ್ಲೆಯಾದ್ಯಂತ ರೈತರ ಪಹಣಿಗಳಿಗೆ ಯಾವುದೇ ಬೆಳೆಯನ್ನು ನಮೂದಿಸುತ್ತಿಲ್ಲ. ಇದರಿಂದಾಗಿ ರೈತರು ಬ್ಯಾಂಕ್ ಮತ್ತು ಕೃಷಿ ಇಲಾಖೆಯಲ್ಲಿ ಯಾವುದೇ ಸವಲತ್ತುಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ, ಗ್ರಾಮಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ರೈತರ ಬೆಳೆಗಳನ್ನು ಪಹಣಿಗೆ ನಮೂದಿಸ ಬೇಕಿದೆಯಾದರೂ ಯಾವ ಗ್ರಾಮಲೆಕ್ಕಾಧಿಕಾರಿಯೂ ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ ಎಂದರು.
ಪಹಣಿಗಳ ದೋಷದ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ತಾಂತ್ರಿಕ ದೋಷದಿಂದಾಗಿ ಈ ರೀತಿ ಮುದ್ರಣವಾಗುತ್ತಿದೆ ಎಂದು ಜಾರಿಕೊಳ್ಳುತ್ತಿದ್ದಾರೆ, ಕಂದಾಯ ಇಲಾಖೆಯ ಅಧಿಕಾರಿಗಳೆಲ್ಲ ಇದೇ ರೀತಿ ಸಿದ್ದ ಉತ್ತರ ಎಂದರು.
ರೈತ ಸಂಘದ ಪದಾಧಿಕಾರಿಗಳ ಮನವಿ ಸ್ವೀಕರಿಸಿದ ಸಚಿವರು ಬೇರೆ ಜಿಲ್ಲೆಗಳಲ್ಲಿ ಈ ರೀತಿಯ ದೂರು ಕೇಳಿ ಬಂದಿರಲಿಲ್ಲ. ಇದೀಗ ರಾಮನಗರ ಜಿಲ್ಲೆಯ ಸಮಸ್ಯೆಯನ್ನು ನೀವು ನನ್ನ ಗಮನಕ್ಕೆ ತಂದಿದ್ದು ತಕ್ಷಣ ಜಿಲ್ಲಾಧಿಕಾರಿ ಜತೆ ಚರ್ಚಿಸಿ ನಿಮ್ಮ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ನಾವೂ ರೈತರ ಮಕ್ಕಳಾಗಿದ್ದು ರೈತರಿಂದಲೇ ನಾನು ಈ ಹಂತ ತಲುಪಿದ್ದೇನೆ, ನನ್ನ ಅಧಿಕಾರವಧಿಯಲ್ಲಿ ರೈತರ ಸಮಸ್ಯೆ ಬಗ್ಗೆ ಯಾವುದೇ ಕಾರಣಕ್ಕೂ ಉದಾಸೀನತೆ ತೋರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ವಿಭಾಗಿಯ ಉಪಾಧ್ಯಕ್ಷ ಎಂ.ರಾಮು ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ರಾಮಕೃಷ್ಣಪ್ಪ, ಕೆ.ಎನ್. ರಾಜು, ಕೃಷ್ಣಪ್ಪ, ಪಾಪಣ್ಣ, ಕಾಡಪ್ಪ ಸಿದ್ದರಾಜು, ತಮ್ಮೇಗೌಡ ಸೇರಿದಂತೆ ಹಲವರು ಹಾಜರಿದ್ದರು.