ದೇವಸ್ಥಾನದ ಬೀಗ ಮುರಿದು ದರೋಡೆ
ರಾಮನಗರ: ದೇವಸ್ಥಾನದ ಬೀಗ ಮುರಿದು ಗರ್ಭಗುಡಿ ಪ್ರವೇಶಿಸಿರುವ ಕಳ್ಳರು ದೇವರ ವಿಗ್ರಹದ ಮೇಲಿದ್ದ ರು.1.25 ಲಕ್ಷ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ವಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಬೈರೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಳ್ಳತನ ನಡೆದಿದ್ದು ಗಂಗಮ್ಮ, ಮಾರಮ್ಮ, ಪೊತಳಪ್ಪ ಹಾಗೂ ಆಂಜನೇಯ ಸ್ವಾಮಿ ದೇವರ ವಿಗ್ರಹಗಳ ಮೇಲಿದ್ದ ಬೆಳ್ಳಿಯ ಮುಖವಾಡಗಳು, 12 ಕಾಸಿನ ಚಿನ್ನದ ಸರ, ಒಂದು ಬೆಳ್ಳಿ ಕಿರೀಟ, ಒಂದು ನಾಗರ ಹೆಡೆ ಸೇರಿದಂತೆ ಟ್ರಂಕ್ನಲ್ಲಿ ಇಟ್ಟಿದ್ದ ಒಡವೆ ಮತ್ತು ಹುಂಡಿಯನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೋಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜೀತದಾಳು ಸಮೀಕ್ಷೆ ಕಾರ್ಯಾಗಾರ ತರಬೇತಿ
ರಾಮನಗರ: ಜಿಲ್ಲಾ ಮಟ್ಟದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಜೀತದಾಳು ಸಮೀಕ್ಷೆಯ ಕಾರ್ಯಾಗಾರ ತರಬೇತಿಯು ಜು.3ರ ಬೆಳಗ್ಗೆ 10ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಉದ್ಘಾಟಿಸುವರು. ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುವರು.
ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ
ರಾಮನಗರ: ಯುವ ಜನರೇ ಹೆಚ್ಚಾಗಿ ಹೆಚ್ಐವಿ, ಏಡ್ಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗೇಗೌಡ ತಿಳಿಸಿದರು. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದಿಂದ ಸೋಮವಾರ ಹಾರೋಕೊಪ್ಪದಲ್ಲಿ ನಡೆದ ಹೆಚ್ಐವಿ, ಏಡ್ಸ್ ಬಗ್ಗೆ ಜನ ಜಾಗೃತಿ ಮೂಡಿಸುವ ಬೀದಿ ನಾಟಕ ಜೀವನ ಜೋಪಾನ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ, ಪರಿಸರ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಷ್ಟೇ ಮಹತ್ವವನ್ನು ಏಡ್ಸ್ ರೋಗದ ಬಗ್ಗೆ ತಿಳಿವಳಿಕೆ ಮೂಡಿಸುವುದಕ್ಕೂ ನೀಡಬೇಕು. ಇದರಿಂದ ಎಲ್ಲರಿಗೂ ಆರೋಗ್ಯ ಭಾಗ್ಯ ದಕ್ಕುವುದು ಎಂದು ಹೇಳಿದರು. ಮಂಡ್ಯದ ರಾಗ ರಂಜಿನಿ ಕಲಾ ತಂಡದವರು ಹೆಚ್ಐವಿ ಸೋಂಕಿನ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ನಾಗರತ್ನ, ಅಂಗನವಾಡಿ ಕಾರ್ಯಕರ್ತೆ ಸೌಭಾಗ್ಯ, ಗ್ರಾ.ಪಂ. ಸದಸ್ಯ ಸಿದ್ದೇಗೌಡ, ಟಿಎಪಿಸಿಎಂಎಸ್ ಕಾರ್ಯದರ್ಶಿ ಶಂಕರೇಗೌಡ ಹಾಜರಿದ್ದರು.
'ರಕ್ತದಾನ ಶ್ರೇಷ್ಠ ದಾನ'
ವಿಜಯಪುರ: ರಕ್ತದಾನ ಶ್ರೇಷ್ಠವಾದ ದಾನವಾಗಿದ್ದು ಪ್ರತಿಯೊಬ್ಬರು ಒಂದು ವರ್ಷದಲ್ಲಿ 3 ಬಾರಿಯಾದರೂ ರಕ್ತದಾನ ಮಾಡಬಹುದಾಗಿದೆ. ದಿನದ 24 ಘಂಟೆಗಳ ಒಳಗೆ ನಾವು ಕೊಟ್ಟಿರುವ ರಕ್ತವು ವೃದ್ಧಿಯಾಗುವುದರ ಜೊತೆಗೆ ಆರೋಗ್ಯ ಹೆಚ್ಚುತ್ತದೆ ಎಂದು ಆರೋಗ್ಯಧಿಕಾರಿ ಡಾ.ಶೈಲೇಂದ್ರ ಕುಮಾರ್ ತಿಳಿಸಿದರು. ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ನಿಯಂತ್ರಣ ಘಟಕ, ಬೆಂಗಳೂರು ಗ್ರಾಮಾಂತರ ಕೆ.ಎಸ್.ಜನರಲ್ ಆಸ್ಪತ್ರೆ, ರೆಡ್ ಕ್ರಾಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾರ್ವಜನಿಕರಲ್ಲಿ ರಕ್ತವನ್ನು ನೀಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎನ್ನುವ ತಪ್ಪು ಅಭಿಪ್ರಾಯವಿದೆ. ಆದರೆ ಅದು ತಪ್ಪು ಎಂದರು. ಇದೇ ಸಂಧರ್ಭದಲ್ಲಿ ಜೆಸಿಐ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮುಕುಂದರಾವ್ ಮಾತನಾಡಿ ರಕ್ತದಾನ ಮಾಡಿದರೆ ಸಾವಿರಾರು ಜನರನ್ನು ಸಾವಿನಿಂದ ಉಳಿಸಲು ಸಹಾಯವಾಗುತ್ತದೆ ಎಂದರು. ಪುರಸಭಾ ಸದಸ್ಯರಾದ ಭಾಸ್ಕರ್ ಮಾತನಾಡಿ ಈ ಮಹತ್ವದ ಕಾರ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ತಂತ್ರ ಜ್ಞಾನ ಎಷ್ಟೇ ಮುಂದುವರೆದರೂ ರಕ್ತ ತಯಾರಿಸಲು ಸಾಧ್ಯವಾಗಿಲ್ಲ ಎಂದರು. ಡಾ.ಪಿ.ವಿ.ರಮೇಶ್, ಡಾ.ಪ್ರಿಯಲತಾ, ಜಿಲ್ಲಾ ಆರೋಗ್ಯಧಿಕಾರಿ ಹನುಮಂತರಾಯಪ್ಪ ಇತರರು ಇದ್ದರು.
ನಾಗೇಂದ್ರರಿಗೆ ಪಿಎಚ್.ಡಿ
ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿರುವ ನಾಗೇಂದ್ರ "ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು: ಒಂದು ವಿಮರ್ಶಾತ್ಮಕ ಅಧ್ಯಯನ" ಎಂಬ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಅಸ್ಸಾಂನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ವಿ.ನಾಗರಾಜ್ ಇವರ ಮಾರ್ಗದರ್ಶಕರಾಗಿದ್ದರು.
ಇಂದು ಅಧಿಕಾರ ಸ್ವೀಕಾರ
ವಿಜಯಪುರ: ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಜುಲೈ 2ರಂದು ಸಂಜೆ 7ಕ್ಕೆ 2013-14ನೇ ಸಾಲಿನ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ. ಅಧ್ಯಕ್ಷರಾಗಿ ನಿವೃತ್ತ ಎಂಜಿನಿಯರ್ ಶಿವರುದ್ರಮೂರ್ತಿ, ಕಾರ್ಯದರ್ಶಿಯಾಗಿ ಎನ್.ವಿಜಯಬಾಬು ಅಧಿಕಾರ ಸ್ವೀಕರಿಸುವರು. ಎಸ್.ನಾಗೇಂದ್ರ ಭಾಗವಹಿಸಲಿದ್ದಾರೆ ಎಂದು ರೋಟರಿ ಅಧ್ಯಕ್ಷ ವಿ.ಎಸ್.ರವಿ ತಿಳಿಸಿದ್ದಾರೆ.
ಇಂದು ಶಂಕು
ನೆಲಮಂಗಲ: ತಾಲೂಕಿನ ಹಂಚೀಪುರ ಗ್ರಾಮದ ಸರ್ವೆ ನಂ.223ರಲ್ಲಿ ದಿವ್ಯಜ್ಯೋತಿ ವಿದ್ಯಾ ಕೇಂದ್ರದ ವತಿಯಿಂದ ಜುಲೈ 2ರ ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ವೃದ್ಧಾಶ್ರಮ ಮತ್ತು ಬುದ್ಧಿಮಾಂದ್ಯ ಮಕ್ಕಳ ಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಪ್ರೊ.ಬಿ.ಜಿ.ಶಿವರಾಜು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಖ್ಯಾತ ಕಲಾವಿದ ಡಾ. ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕ ನರಸಿಂಹಸ್ವಾಮಿ, ತಹಸೀಲ್ದಾರ್ ವಿ.ರಾಜೇಂದ್ರ, ಮಾಜಿ ಸಚಿವ ಅಂಜನಮೂರ್ತಿ, ಮಾಜಿ ಶಾಸಕ ಎಂ.ವಿ.ನಾಗರಾಜು, ಯಂಟಗಾನಹಳ್ಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ (ವಕೀಲರು), ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಬಿ.ಹೆಚ್.ಅಶ್ವತ್ಥನಾರಾಯಣಗೌಡ, ಡಿವೈಎಸ್ಪಿ ಆರ್. ಮಲ್ಲೇಶ್, ಜಿ.ಪಂ.ಸದಸ್ಯರಾದ ಬಿ.ಎಂ.ಎಲ್.ಕಾಂತರಾಜು, ರಾಮು ಅವರು ಆಗಮಿಸಲಿದ್ದಾರೆ ಎಂದು ದಿವ್ಯಜ್ಯೋತಿ ವಿದ್ಯಾ ಕೇಂದ್ರದ ಅಧ್ಯಕ್ಷ ಎಲ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮಾಧ್ಯಮಿಕ ಶಿಕ್ಷಕರ ಸಂಘಕ್ಕೆ ಆಯ್ಕೆ
ಕನಕಪುರ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯಕಾರ್ಯಕಾರಣಿ ಸಮಿತಿ ಸಭೆ ಬೆಂಗಳೂರಿನ ಕೇಂದ್ರ ಕಾರ್ಯಾಲಯದಲ್ಲಿ ನಡೆಯಿತು. ರಾಜ್ಯಾಧ್ಯಕ್ಷ ಬಾಲಕೃಷ್ಣಭಟ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಾಧ್ಯಮಿಕ ಶಾಲಾಶಿಕ್ಷಕರ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿಗಳಾಗಿ ಶಿವಾನಂದ ಸಿಂಧನಕೇರಾ, ರಾಜ್ಯ ಸಹ ಪ್ರಧಾನ ಕಾರ್ಯದರ್ಶಿಗಳಾಗಿ ಕನಕಪುರದ ಚಿದಾನಂದ ಪಾಟೀಲ, ಬೆಂಗಳೂರು ವಿಭಾಗ ಪ್ರಮುಖ ಹಾಗೂ ರಾಜ್ಯಕಾರ್ಯಕಾರಿಣಿ ಸದಸ್ಯರಾಗಿ ಕನಕಪುರದ ಬಿ.ಎಚ್. ವರದರಾಜು, ಬೆಂಗಳೂರು ವಿಭಾಗದ ಸಹಪ್ರಮುಖರಾಗಿ ಸಿ.ಪುಟ್ಟಸ್ವಾಮಿ ಆಯ್ಕೆಗೊಂಡಿದ್ದಾರೆ. ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಸಿದ್ಧಲಿಂಗಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಬಸವರಾಜು, ಅಂಕಮಾದೇಗೌಡ, ಪ್ರಸನ್ನ ಕುಮಾರ್,ಪರಶಿವಮೂರ್ತಿ,ರಾಜಣ್ಣ, ತಾ.ಕಾರ್ಯದರ್ಶಿ ಕೃಷ್ಣಪ್ಪ ಅಭಿನಂದಿಸಿದ್ದಾರೆ.
ಶಿಕ್ಷಕ ಕಾರ್ಯಾಗಾರ ಸಮಾರೋಪ
ದೇವನಹಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದೇವನಹಳ್ಳಿ ತಾಲೂಕು ಭಾರತ ಸೇವಾದಳ ಸಮಿತಿಯವರು ಆಯೋಜಿಸಿದ್ದ ಒಂದು ದಿನದ ಶಿಕ್ಷಕ ಮಿಲಾಫ್ ಕಾರ್ಯಾಗಾರ ಶಿಬಿರದ ಸಮಾರೋಪ ಸಮಾರಂಭ ಇಲ್ಲಿನ ಗುರುಭವನದಲ್ಲಿ ಸೋಮವಾರ ಆಯೋಜಿಸಲಾಗಿತ್ತು. ಸೇವಾದಳ ಬೆಂಗಳೂರು ಜಿಲ್ಲಾ ಸಂಘಟಕರಾದ ಬೋರಯ್ಯ ಶಿಕ್ಷಕರಿಗೆ ಭಾರತ ಸೇವಾದಳ ಶಾಲಾ ಶಾಖೆಯ ವಾರ್ಷಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ತಾಲೂಕು ಸೇವಾದಳ ಕಾರ್ಯದರ್ಶಿ ಎ.ಶಿವರಾಮಯ್ಯ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ತಾಲೂಕು ಘಟಕ ಉತ್ತಮವಾಗಿ ಕೆಲಸಮಾಡುತ್ತಿದ್ದು ಸೇವಾದಳ ಶಿಕ್ಷಕರು ಮಕ್ಕಳಲ್ಲಿ ಜಾತೀಯ ಭಾವನೆಗಳನ್ನು ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸಲಿ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಸ್.ಲಕ್ಷ್ಮೀನಾರಾಯಣ್ ವಹಿಸಿ ಭಾರತ ಸೇವಾದಳ ತಾಲೂಕು ಘಟಕದಿಂದ ಈಗಾಗಲೇ ಸರ್ಕಾರಿ ಶಾಲೆಗಳ ಆವರಣಗಳಲಿ 75 ಸಾವಿರ ಸಸಿಗಳನ್ನು ನೆಡಲಾಗಿದ್ದು ಇನ್ನು ಮುಂದಿನ ದಿನಗಳಲ್ಲಿ 25 ಸಾವಿರ ಸಸಿಗಳನ್ನು ಮಕ್ಕಳಿಂದಲೇ ನಡಿಸಿ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪಡೆದ ಸೂರ್ಯಕಲಾ ಮೂರ್ತಿ ಹಾಗೂ ವಿಜಯಪುರದ ಎಂ. ಕೃಷ್ಣಮ್ಮ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ರವಿಪ್ರಕಾಶ್ ಮಾತನಾಡಿದರು. ಸಮಾರಂಭದಲ್ಲಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸಗೌಡ, ಖಜಾಂಚಿ ತಿಮ್ಮರಾಯಪ್ಪ, ವೆಂಕಟರಾಜು ಉಪಸ್ಥಿತರಿದ್ದರು. ಬಿ.ಪುಟ್ಟಸ್ವಾಮಿ ಸ್ವಾಗತ ಕೋರಿದರು.
ನಾಳೆ ಪ್ರತಿಭಟನೆ
ದೇವನಹಳ್ಳಿ: ದೇವನಹಳ್ಳಿ ಬಳಿಯ ಪಾರಿವಾಳ ಗುಟ್ಟದ ಪುರತಾನ ದೇವಾಲಯಗಳ ಉಳಿವಿಗಾಗಿ ಪಾರಿವಾಳ ಗುಟ್ಟದ ಸಂರಕ್ಷಣಾ ಸಮಿತಿಯವರು ಬುಧವಾರ ಗುಟ್ಟದಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ಹನುಮಾನ್ ಜ್ಯೋತಿಯೊಂದಿಗೆ ಸರ್ಕಾರಿ ಅಧಿಕಾರಿಗಳ ವಿರುದ್ಧ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಸಂಚಾಲಕ ಸಿ.ಮುನಿರಾಜು ಪ್ರವಾಸಿ ಮಂದಿರದಲ್ಲಿ ನಡೆದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಸೋಮವಾರ ತಿಳಿಸಿದರು.
ಹಿಂದೂ ದೇವಾಲಯಗಳಿಗಾಗಿ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾಗಿದ್ದ ಪ್ರದೇಶವನ್ನು ಜೈನ ಸಂಸ್ಥೆಯವರಿಗೆ ನೀಡುವ ಹುನ್ನಾರ ನಡೆಸಿರುವ ಕಂದಾಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು ಬುಧವಾರ ಬೆಳಗ್ಗೆ 12 ಗಂಟೆಗೆ ಜಿಲ್ಲಾಧಿಕಾರಿಗಳು ಆಗಮಿಸಿ ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ವೆಂಕಟನಾರಾಯಣಪ್ಪ ತಿಳಿಸಿದರು. ಎಲ್ಲ ಸಂಘ ಸಂಸ್ಥೆಯವರು ಪ್ರತಿಭಟನಾ ಮೆರವಣಿಗೆಗೆ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದರು.