ಪುರಾತನ ದೇವಾಲಯಗಳ ಉಳಿವಿಗಾಗಿ ನಾಳೆ ಹೋರಾಟ, ಪ್ರತಿಭಟನೆ
ದೇವನಹಳ್ಳಿ: ದೇವನಹಳ್ಳಿ ಬಳಿಯ ಪಾರಿವಾಳ ಗುಟ್ಟದ ಪುರತಾನ ದೇವಾಲಯಗಳ ಉಳಿವಿಗಾಗಿ ಪಾರಿವಾಳ ಗುಟ್ಟದ ಸಂರಕ್ಷಣಾ ಸಮಿತಿಯವರು ಬುಧವಾರ ಗುಟ್ಟದಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ಹನುಮಾನ್ ಜ್ಯೋತಿಯೊಂದಿಗೆ ಸರ್ಕಾರಿ ಅಧಿಕಾರಿಗಳ ವಿರುದ್ಧ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಸಂಚಾಲಕ ಸಿ.ಮುನಿರಾಜು ಪ್ರವಾಸಿ ಮಂದಿರದಲ್ಲಿ ನಡೆದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಸೋಮವಾರ ತಿಳಿಸಿದರು.
ಹಿಂದೂ ದೇವಾಲಯಗಳಿಗಾಗಿ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾಗಿದ್ದ ಪ್ರದೇಶವನ್ನು ಜೈನ ಸಂಸ್ಥೆಯವರಿಗೆ ನೀಡುವ ಹುನ್ನಾರ ನಡೆಸಿರುವ ಕಂದಾಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು ಬುಧವಾರ ಬೆಳಗ್ಗೆ 12 ಗಂಟೆಗೆ ಜಿಲ್ಲಾಧಿಕಾರಿಗಳು ಆಗಮಿಸಿ ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ವೆಂಕಟನಾರಾಯಣಪ್ಪ ತಿಳಿಸಿದರು.
ವಕೀಲರಾದ ಸಿದ್ದಾರ್ಥ ಮಾತನಾಡಿ ಪಾರಿವಾಳ ಗುಟ್ಟಕ್ಕೂ ಮತ್ತು ದೇವನಹಳ್ಳಿ ಜನತೆಗೂ ಧಾರ್ಮಿಕ ಸಂಬಂಧವಿರುವುದರಿಂದ ಉಳಿದಿರುವ ಜಮೀನನ್ನು ಯಾವುದೇ ಸಂಸ್ಥೆ ಅಥವ ಟ್ರಸ್ಟ್‌ಗೆ ಮಂಜೂರು ಮಾಡಬಾರದು ಅಲ್ಲದೆ ಈಗಾಗಲೇ ಮಂಜೂರಿಯಾಗಿರುವ ಜಮೀನು ಸರ್ಕಾರದ ಷರತ್ತುಗಳ ಉಲ್ಲಂಘನೆಯಾಗಿರುವುದರಿಂದ ಸರ್ಕಾರ ಮತ್ತೆ ವಾಪಸ್ ಪಡೆಯಬೇಕು ಎಂದರಲ್ಲದೆ ನಮ್ಮ ಮುಂದಿನ ಪೀಳಿಗೆಗಾದರೂ ಪಾರಿವಾಳ ಗುಟ್ಟ ಹಿಂದೂಗಳಿಗೆ ಉಳಿಸಬೇಕಿದೆ. ಅಲ್ಲದೆ ಸರ್ಕಾರ ಗುಟ್ಟವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಚಂದ್ರಶೇಖರ್, ಅಂಬರೀಶ್, ಎಂ.ಎನ್.ರಾಮಣ್ಣ, ವಿಜಯಕುಮಾರ್ ಮಾತನಾಡಿ ಎಲ್ಲ ಸಂಘ ಸಂಸ್ಥೆಯವರು ಪ್ರತಿಭಟನಾ ಮೆರವಣಿಗೆಗೆ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದರು.