ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಮೂಲ್‌ಗೆ ಪ್ರತಿದಿನ ರು. 6 ಲಕ್ಷ ನಷ್ಟ

Vishwanath S
Updated On : 2 Jul 2013, 1:10 am

ಕ.ಪ್ರ. ವಾರ್ತೆ ,  ದೊಡ್ಡಬಳ್ಳಾಪುರ ,  ಜು.1
ಹಾಲು ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ ಪ್ರತಿದಿನ 6 ಲಕ್ಷ ರು. ನಷ್ಟ ಅನುಭವಿಸುತ್ತಿದೆ. ರಾಜ್ಯ ಸರ್ಕಾರ ಹಾಲಿನ ಪುಡಿ ತಯಾರಿಕೆಗೆ ಸಹಾಯಧನ ನೀಡಿದರೆ ಮಾತ್ರ ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ನೀಡಲು ಸಾಧ್ಯ ಎಂದು ಬಮೂಲ್ ಅಧ್ಯಕ್ಷ ಸಿ.ಮಂಜುನಾಥ್ ಹೇಳಿದರು.
ಇಲ್ಲಿನ ಬೆಸೆಂಟ್ ಪಾರ್ಕಿನಲ್ಲಿ ಬಮೂಲ್ ಮತ್ತು ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆದ 2012-13ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಮೂಲ್‌ಗೆ ಪ್ರತಿದಿನ 12.21 ಲಕ್ಷ ಲೀಟರ್ ಹಾಲು ಬರುತ್ತಿದೆ. ಆದರೆ ಮಾರಾಟವಾಗುತ್ತಿರುವುದು ಮಾತ್ರ 9 ಲಕ್ಷ ಲೀಟರ್. ಉಳಿದ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಪರಿಣಾಮವಾಗಿ ಒಕ್ಕೂಟ ನಷ್ಟದಲ್ಲಿದೆ. ಇಷ್ಟಾದರೂ ಬಮೂಲ್ ಹಾಲು ಉತ್ಪಾದಕ ರೈತರಿಗೆ ಉತ್ತಮ ಬೆಲೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ ಎಂದರು.
ರಾಸುಗಳ ವಿಮಾ ಮೊತ್ತವನ್ನು 2013ನೇ ಸಾಲಿನಿಂದ 30 ರಿಂದ 35 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಜನಶ್ರೀಭೀಮಾ ಯೋಜನೆಯಲ್ಲಿ ವಾರ್ಷಿಕ 65 ರು.ಗಳನ್ನು ಉತ್ಪಾದಕ ರೈತರು ಪಾವತಿ ಮಾಡಿದರೆ ಉಳಿದ ಮೊತ್ತವನ್ನು ಒಕ್ಕೂಟ, ರಾಜ್ಯ ಮತ್ತು ಕೇಂದ್ರ ಸರ್ಕಾರ ಪಾವತಿ ಮಾಡಲಿದೆ. ಇದರಿಂದ ರೈತರ ಮಕ್ಕಳಿಗೆ 8ರಿಂದ 12ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ 1500 ರು. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಉತ್ಪಾದಕರು ಅಪಘಾತಗಳಿಗೊಳಗಾದರೆ 50ರಿಂದ 80 ಸಾವಿರ ಪರಿಹಾರ ಕೊಡಲಾಗುತ್ತಿದೆ ಎಂದು ವಿವರಿಸಿದರು.
ಶ್ಲಾಘನೀಯ: ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ರೈತರ ಮಕ್ಕಳಿಗೆ ಉಪಯೋಗವಾಗುವ ಈ ಬಗೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಈ ಬಗೆಯ ರೈತ ಕಲ್ಯಾಣ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಬಮೂಲ್ ನಿರ್ದೇಶಕ ಎನ್.ಹನುಮಂತೇಗೌಡ ಅಧ್ಯಕ್ಷತೆ ವಹಿಸಿದ್ದರು. ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಶಾಸಕರಾದ ಆರ್.ಜಿ.ವೆಂಕಟಾಚಲಯ್ಯ, ಜೆ.ನರಸಿಂಹಸ್ವಾಮಿ, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಗುರುಲಿಂಗಯ್ಯ, ಪ್ರಧಾನ ವ್ಯವಸ್ಥಾಪಕ ಡಾ.ಸಿ.ಎನ್.ರಮೇಶ್, ಡಾ.ರವಿಶಂಕರ ಹೆಗ್ಗಡೆ, ಉಪವ್ಯವಸ್ಥಾಪಕ ಡಾ.ಆರ್.ಗೋಪಾಲಕೃಷ್ಣಗೌಡ, ದೊಡ್ಡಬಳ್ಳಾಪುರ ಘಟಕದ ಉಪವ್ಯವಸ್ಥಾಪಕ ಡಾ.ನರಸಿಂಹನ್  ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement