ಹುರುಳಿಲ್ಲದ ಮಾತಿಗೆ ಕಾಂಗ್ರೆಸ್ಸಿಗರು ನಿಸ್ಸೀಮರು
ಕನ್ನಡಪ್ರಭ ವಾರ್ತೆ , ಮಾಗಡಿ , ಜು.1
ಕಾಂಗ್ರೆಸ್ಸಿನ ಮುಖಂಡರು ಹುರುಳಿಲ್ಲದ ಮಾತುಗಳನ್ನಾಡುವುದರಲ್ಲಿ ನಿಸ್ಸೀಮರು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಲೇವಡಿ ಮಾಡಿದರು.
ಅವರು ಮಾಗಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿರಬೇಕಾದರೆ, ಸ್ಥಳೀಯ ಕಾಂಗ್ರೆಸ್ ಮುಖಂಡರು ಕ್ಷೇತ್ರಕ್ಕೆ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ನೀರಾವರಿ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿಯುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನೋಡಿದರೆ ಅವರೆಲ್ಲ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಲು ಹೊರಟಿರುವಂತಿದೆ. ಅವರ ಹೇಳಿಕೆ ಹಾಸ್ಯಾಸ್ಪದ ಎಂದ ಬಾಲಕೃಷ್ಣ ಹೇಳಿದರು.
ಕಾಂಗ್ರೆಸ್ ಮುಖಂಡರು, ಮೊದಲು ಪಕ್ಷಕ್ಕೆ ರಾಜಿನಾಮೆ ನೀಡಿ, ಪಕ್ಷಾತೀತವಾಗಿ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಟಕ್ಕಿಳಿಯಲಿ, ನಾನು ಸಹ ಶಾಸಕನಾಗಿ ನಿಮ್ಮ ಜನಪರ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಎಂದು ಸವಾಲು ಹಾಕಿದರು.
ಹೋರಾಟ ಸಮಿತಿಗೆ ಕೆಪಿಸಿಸಿ ಸದಸ್ಯ ಎ.ಮಂಜು ಅಧ್ಯಕ್ಷ, ಮಾಜಿ ಸಚಿವ ಎಚ್.ಎಂ.ರೇವಣ್ಣ ಗೌರವಾಧ್ಯಕ್ಷರಂತೆ, ಇದು ಕಾಂಗ್ರೆಸ್ ಹೋರಾಟ ಸಮಿತಿ ಎನ್ನಬಹುದು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು ನೀರಾವರಿ ಯೋಜನೆ ಅನುಷ್ಠಾನಕ್ಕೆ ಯೋಜನೆ ರೂಪಿಸಿ ಕೈಚಲ್ಲಿದರು. ಆಗ ಗಿರಿಯಣ್ಣ ಏನು ಮಾಡುತ್ತಿದ್ದರು ಎಂದು ಶಾಸಕರು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡ ಗಿರಿಯಣ್ಣ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ, ನಂತರ ನನ್ನ ಬಗ್ಗೆ ಮಾತನಾಡಲಿ ಆಗ ಉತ್ತರಿಸುತ್ತೇನೆ ಎಂದರು.
ವಿಧಾನ ಸಭೆ ಚುನಾವಣೆ ಮುಗಿಯುತ್ತಿದ್ದಂತೆ ಶಾಸಕ ಎಚ್.ಸಿ. ಬಾಲಕೃಷ್ಣ ಜೈಲಿಗೆ ಹೋಗುತ್ತಾರೆ ಎಂದು ಕ್ಷೇತ್ರದ್ಯಾದಂತ ಪ್ರಚಾರದಲ್ಲಿ ತೊಡಗಿದ್ದ ಗಿರಿಯಣ್ಣ, ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜೈಲಿಗೆ ಕಳಿಸಲಿ ನೋಡೋಣ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.
ಸಂಸ್ಕೃತ ವಿವಿ ಬೇಡ: ಸಂಸ್ಕೃತ ವಿವಿ ತಾಲೂಕಿಗೆ ಬೇಡ, ಹಾಗೊಂದು ವೇಳೆ ಮಂಜೂರಾತಿಗೆ ಮುಂದಾದರೆ ಸಾರ್ವಜನಿಕವಾಗಿ ಹೋರಾಟಕ್ಕಿಳಿದು, ಸಂಸ್ಕೃತ ವಿವಿಯನ್ನು ತಿರಸ್ಕರಿಸುತ್ತೇನೆ ಎಂದರು.