ನೀರಿನ ಅಕ್ರಮ ಸಂಪರ್ಕ ಸಕ್ರಮೀಕರಣ: ಪಂಗನಾಮ
ಕ.ಪ್ರ.ವಾರ್ತೆ , ರಾಮನಗರ , ಜು.2
ನೀರಿನ ಅಕ್ರಮ ಸಂಪರ್ಕಗಳ ಸಕ್ರಮೀಕರಣಕ್ಕೆ ವಸೂಲಾದ ಭಾರಿ ಮೊತ್ತದ ಹಣ ಸರ್ಕಾರಿ ಖಜಾನೆ ಬದಲು ಅಧಿಕಾರಿ ಮತ್ತು ಸಿಬ್ಬಂದಿ ಕಿಸೆ ಸೇರಿದೆ. ಸಂಪರ್ಕದ ಸಕ್ರಮ ನಿರೀಕ್ಷೆಯಲ್ಲಿರುವ ಗ್ರಾಹಕರಿಗೆ ಪಂಗನಾಮ ಬಿದ್ದಿದೆ.
ಈ ಹಗರಣವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಚನ್ನಪಟ್ಟಣ ಉಪ ವಿಭಾಗದಲ್ಲಿ ಬೆಳಕಿಗೆ ಬಂದಿದೆ. ಹಗರಣದಲ್ಲಿ ಶಾಮೀಲಾದ ಅಧಿಕಾರಿ ಮತ್ತು ಸಿಬ್ಬಂದಿಯು ಗ್ರಾಹಕರನ್ನು ವಂಚಿಸಿ, ಮಂಡಳಿಗೂ ನಷ್ಟ ಉಂಟು ಮಾಡಿದ್ದಾರೆ.
ಜಮೆ ಆಗದ ಮೊತ್ತ: ಗ್ರಾಹಕರಿಂದ ವಸೂಲು ಮಾಡಲಾದ ಹಣಕ್ಕೆ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಅಥವಾ ಇತರೆ ಅಧಿಕಾರಿಯ ಸಹಿ ಇರುವ ರಶೀದಿಯನ್ನೇ ನೀಡಲಾಗಿದೆ. ಆದರೆ, ಸದರಿ ರಶೀದಿಯ ಸಂಖ್ಯೆ, ಗ್ರಾಹಕರ ವಿವರ ದಾಖಲೆಯಲ್ಲೆಲ್ಲೂ ನಮೂದಾಗಿಲ್ಲ. ಮೊತ್ತ ಖಜಾನೆಗೂ ಜಮೆ ಆಗಿಲ್ಲ.
ಚನ್ನಪಟ್ಟಣ ನಗರದಾದ್ಯಂತ ಸರಿ ಸುಮಾರು 3 ಸಾವಿರದಷ್ಟು ನೀರಿನ ಅಕ್ರಮ ಸಂಪರ್ಕಗಳಿವೆ. ಈ ಪೈಕಿ ನೂರಾರು ಗ್ರಾಹಕರಿಂದ ಅಕ್ರಮವಾಗಿ ಕರ ವಸೂಲು ಮಾಡಲಾಗಿದೆ. ಹಗರಣದಲ್ಲಿ ಲಕ್ಷಾಂತರ ರು. ಲೂಟಿ ನಡೆದಿರುವುದು ರುಜುವಾತಾಗಿದೆ.
ಹಗರಣಕ್ಕೆ ರಹದಾರಿ: ಮಂಡಳಿಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾಗ್ಯೂ ಹೊರ ಗುತ್ತಿಗೆ ಹೆಸರಿನಲ್ಲಿ ಬೇನಾಮಿಯಾಗಿ ನೇಮಿಸಿಕೊಂಡ ವ್ಯಕ್ತಿಗಳಿಗೆ ಕರ ವಸೂಲಾತಿ ಹೊಣೆಯನ್ನು ಅಧಿಕಾರಿಗಳು ವಹಿಸಿಕೊಟ್ಟಿದ್ದಾರೆ. ಹೀಗಾಗಿ ಹಗರಣದಲ್ಲಿ ಅಧಿಕಾರಿಗಳ ಶಾಮೀಲಾತಿ ಶಂಕೆ ಮೂಡಿದೆ.
ಕರ ವಸೂಲಿಗೆ ನೇಮಿಸಲ್ಪಟ್ಟ ಹೊರ ಗುತ್ತಿಗೆ ನೌಕರರು ಕೆಲವೇ ದಿನಗಳಲ್ಲಿ ಬದಲಾಗುತ್ತಿದ್ದಾರೆ. ಕೆಲವರು ತಾವಾಗಿಯೇ ಕೆಲಸ ಬಿಟ್ಟು ಹೋಗಿದ್ದಾರೆ. ಹೀಗಾಗಲು ಹಗರಣದಲ್ಲಿ ಸಿಕ್ಕಿಬೀಳಬಹುದು ಎನ್ನುವ ಆತಂಕವೇ ಕಾರಣವೆಂದು ಹೇಳಲಾಗುತ್ತಿದೆ.
ಸಿಬ್ಬಂದಿ ಕೈಚಳಕ: ಚನ್ನಪಟ್ಟಣದ ಸ್ವಾಮಿಗಳ ಬಯಲಿನ ಆರ್.ರಾಧಿಕಾ ಎಂಬುವವರ ನೀರಿನ ಸಂಪರ್ಕ ಸಂಖ್ಯೆ 684-42ಕ್ಕೆ 2012ರ ಅಕ್ಟೋಬರ್ 31 ರಲ್ಲಿ ನೀಡಿರುವ ರಶೀದಿಯಲ್ಲಿ ಹೊಸ ಸಂಪರ್ಕ ಶುಲ್ಕ ರು.2 ಸಾವಿರ, ಬೋರ್ವೆಲ್ ಕೊರೆತಕ್ಕೆ ರು.100 ಹಾಗೂ 3 ತಿಂಗಳ ಮುಂಗಡ ರು.360 ಸೇರಿದಂತೆ ರು.2460 ಸಂದಾಯದ ವಿವರ ನೀಡಲಾಗಿದೆ. ರಶೀದಿ ಸಂಖ್ಯೆ 269151 ಆಗಿರುತ್ತದೆ.
ಅದೇ ಬಡಾವಣೆಯ ವಿ.ಕಿಶೋರ್ ಅವರ ಅಕ್ರಮ ಸಂಪರ್ಕಕ್ಕೆ ರು. 3960 ವಸೂಲು ಮಾಡಲಾಗಿದೆ. ಇದರಲ್ಲಿ ಹೊಸ ಸಂಪರ್ಕದ ವೆಚ್ಚ ರು.2000, ಬೋರ್ ಕೊರೆತ ರು.100, 3 ತಿಂಗಳ ಮುಂಗಡ ರು.360 ಮತ್ತು ದಂಡ ರು.1500 ಎಂದು ನಮೂದಾಗಿದೆ. ರಶೀದಿ ಸಂಖ್ಯೆ 257578 ಆಗಿದೆ. ಇವೆರಡೂ ರಶೀದಿಗಳ ವಿವರ ಮಂಡಳಿಯ ದಾಖಲೆಗಳಲ್ಲಿ ಇಲ್ಲವೇ ಇಲ್ಲ.
ಕೆಲವೊಂದು ಹೊಸ ಸಂಪರ್ಕಗಳ ನೀಡಿಕೆ ಸಂದರ್ಭದಲ್ಲೂ ಅಧಿಕಾರಿ ಮತ್ತು ಸಿಬ್ಬಂದಿ ಕೈಚಳಕ ತೋರಿರುವ ಗುಮಾನಿ ಇದೆ. ಫೋರ್ಜರಿ ರಶೀದಿ ನೀಡಿ, ಕರವನ್ನು ಜೇಬಿಗಿಳಿಸಿಕೊಂಡ ಸಿಬ್ಬಂದಿಯು ಅಲ್ಲಿಂದಾಚೆಗೆ ಸದರಿ ಸಂಪರ್ಕಗಳಿಗೆ ಮಾಸಿಕ ಶುಲ್ಕವನ್ನಷ್ಟೇ ವಿಧಿಸಿ ಅನುಮಾನ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ರಶೀದಿಯನ್ನೇ ನೀಡದೆ ವಂಚಿಸಲಾಗಿದೆ.
ಎಚ್ಚೆತ್ತುಕೊಳ್ಳಬೇಕಿದೆ: ಹೊಸ ಸಂಪರ್ಕ ಪಡೆಯಲು ಮತ್ತು ಪಡೆದಿರುವ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಹಣ ಸಂದಾಯ ಮಾಡಿರುವ ಚನ್ನಪಟ್ಟಣದ ಗ್ರಾಹಕರು ತಕ್ಷಣ ಎಚ್ಚೆತ್ತುಕೊಂಡು, ರಶೀದಿಯೊಂದಿಗೆ ಕಚೇರಿಗೆ ತೆರಳಿ ವಿಚಾರಣೆ ಮಾಡುವುದು ಸೂಕ್ತ.
ಒಂದೊಮ್ಮೆ ತಮ್ಮಲ್ಲಿ ರಶೀದಿ ಇದೆ ಎಂದು ನಿಶ್ಚಿಂತೆಯಿಂದ ಇದ್ದರೆ ನಿಮ್ಮ ನೀರಿನ ಸಂಪರ್ಕ ಅಕ್ರಮದ ಪಟ್ಟಿಯಲ್ಲೇ ಮುಂದುವರೆಯುತ್ತದೆ. ಮತ್ತೊಮ್ಮೆ ದಂಡ ಸಮೇತ ಕರ ಸಂದಾಯ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಈಗಲೇ ಎಚ್ಚೆತ್ತರೆ ಲೋಪ ಸರಿಪಡಿಸಿಕೊಳ್ಳಲು ಅವಕಾಶ ಸಿಗಲಿದೆ.
ಮುಚ್ಚಿ ಹಾಕುವ ಯತ್ನ: ಚನ್ನಪಟ್ಟಣದಲ್ಲಿ ಮಾತ್ರವಲ್ಲದೆ ರಾಮನಗರದ ವ್ಯಾಪ್ತಿಯಲ್ಲೂ ಈ ಹಗರಣ ನಡೆದಿರುವ ಬಗ್ಗೆ ಶಂಕೆ ಮೂಡಿದೆ. ಚನ್ನಪಟ್ಟಣದಲ್ಲಿ ಹಗರಣ ಬಯಲಾಗುತ್ತಿದ್ದಂತೆಯೇ ಮಂಡಳಿಯ ಉನ್ನತ ಅಧಿಕಾರಿಗಳು ಹೊರ ಗುತ್ತಿಗೆ ಸಿಬ್ಬಂದಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಅನಿಲ್ ಎಂಬ ಹೊರ ಗುತ್ತಿಗೆ ನೌಕರನ ವಿರುದ್ಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳ ದೂರಿನ ಪ್ರಕಾರ ಅನಿಲ್ ರು.49 ಸಾವಿರವನ್ನಷ್ಟೇ ವಂಚಿಸಿದ್ದಾನೆ. ವಾಸ್ತವದಲ್ಲಿ ಲಕ್ಷಾಂತರ ರು. ಲೂಟಿಯಾಗಿದೆ. ಅನಿಲ್ ಒಬ್ಬನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಹಗರಣದಲ್ಲಿ ತಿಂದು ತೇಗಿರುವ ಇತರೆ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ರಕ್ಷಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಹಗರಣದ ಪ್ರಮುಖ ರೂವಾರಿಗಳು ವರ್ಗ ಮಾಡಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.
ಸಮಗ್ರ ತನಿಖೆ ಅಗತ್ಯ: ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಶುದ್ಧ, ಸಮರ್ಪಕ ಕುಡಿಯುವ ನೀರು ಪೂರೈಕೆ ಇನ್ನೂ ಸಾಧ್ಯವಾಗಿಲ್ಲ. ಒಳ ಚರಂಡಿ ವ್ಯವಸ್ಥೆಯಲ್ಲಿನ ಅದ್ವಾನ ಹೇಳ ತೀರದು. ಈ ಸಂಬಂಧ ಯಾವುದೇ ಕೆಲಸಕ್ಕೆ ಸಾರ್ವಜನಿಕರು ಬೇಡಿಕೆ ಇಟ್ಟಾಗಲೂ ಸಂಪನ್ಮೂಲದ ಕೊರತೆ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸುತ್ತಿರುತ್ತಾರೆ.
ಅನಗತ್ಯದ ಕಾಮಗಾರಿಗಳಿಗೆ ಕೋಟಿಗಟ್ಟಲೆ ಹಣ ಹರಿಸಿದರೆ, ಗ್ರಾಹಕರಿಂದ ಸಂದಾಯವಾದ ಕರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಿಸೆಗೆ ಸೇರಿದರೆ ಮಂಡಳಿ ಖಜಾನೆ ತುಂಬುವ ಬಗೆಯಾದರೂ ಹೇಗೆನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಕರ ವಸೂಲಾತಿ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಿಮಿಂಗಿಲಗಳ ಬೇಟೆಯಾಡಬೇಕಿದೆ.
ತನಿಖೆ ನಡೆಸಿ ಕ್ರಮ
ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಚನ್ನಪಟ್ಟಣದಲ್ಲಿ ನೀರಿನ ಸಂಪರ್ಕ, ಅಕ್ರಮ ಸಂಪರ್ಕಗಳ ಸಕ್ರಮಕ್ಕೆ ಕರ ವಸೂಲಿ ಹಗರಣ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
- ವಿ.ಶ್ರೀರಾಮರೆಡ್ಡಿ, ಜಿಲ್ಲಾಧಿಕಾರಿ, ರಾಮನಗರ
ಮತ್ತೀಕೆರೆ ಜಯರಾಮ್