ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರತಿಭಾ ಪುರಸ್ಕಾರ

Vishwanath S
Updated On : 3 Jul 2013, 1:05 am

ನೆಲಮಂಗಲ: ತಾಲೂಕು ಒಕ್ಕಲಿಗ ಸರ್ಕಾರಿ ನೌಕರರ ಸಂಘದ ವತಿಯಿಂದ 2012-13ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ತಾಲೂಕಿನ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುವುದು.  ಒಕ್ಕಲಿಗ ಜನಾಂಗದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಶೇ.85ಕ್ಕಿಂತ ಹಾಗೂ ಶೇ.80ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಪ್ರತಿಭಾನ್ವಿತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಪ್ರತಿಭಾನ್ವಿತರು ಜುಲೈ 20ರ ಶನಿವಾರದೊಳಗಾಗಿ ತಮ್ಮ ದೃಢೀಕೃತ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.  ಅರ್ಜಿಗಳನ್ನು ಝ್ಟಿಠಜಝಣ್ಜಟಛ್ಝಟ.್ಛ್ಟಟ  ಮತ್ತು ್ಞ್ಜ.್ಞಛಟಿ.ಟಜಜಅ್ಜಟಛ್ಝಟ.್ಛ್ಟಟ ಈ ವಿಳಾಸಕ್ಕೆ  ಮೇಲ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಕೆಂಪೇಗೌಡ-9448713156, ಕಾರ್ಯದರ್ಶಿ ತೋಪೇಶ್ -9141737924  ಸಂಪರ್ಕಿಸುವಂತೆ ಕೋರಲಾಗಿದೆ.

ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನ
ರಾಮನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ರಾಮನಗರ ಟೌನ್, ಕೆಂಪೇಗೌಡನದೊಡ್ಡಿ ಹಾಗೂ ಜಿಗೇನಹಳ್ಳಿಯಲ್ಲಿರುವ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ 2013-14ನೇ ಸಾಲಿಗೆ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಪದವಿ ಪೂರ್ವ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು. ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಮತ್ತು ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳ ನಿಲಯ ಪಾಲಕರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜು.10ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಕಚೇರಿಗೆ ಅಥವಾ ವಿದ್ಯಾರ್ಥಿ ನಿಲಯಗಳಿಗೆ ಸಲ್ಲಿಸಬಹುದು.

ಹೊಸಕೋಟೆ ಎಚ್.ಆರ್.ಶಂಕರ್‌ಗೆ ಚಿನ್ನ
ಹೊಸಕೋಟೆ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ 34ನೇ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಹೊಸಕೋಟೆಯ ಎಚ್.ಆರ್.ಶಂಕರ್ ಷಾಟ್‌ಪಟ್‌ನಲ್ಲಿ ಚಿನ್ನ, ಡಿಸ್ಕಸ್ ಎಸೆತದಲ್ಲಿ ಕಂಚುಗಳಿಸಿದ್ದಾರೆ.
ಹಾಗೆಯೆ ನಡಿಗೆ ಸ್ಪರ್ಧೆಯಲ್ಲಿ ಕೆ.ಮಂಜುನಾಥ ಮತ್ತು ಪೂಜಮ್ಮ ಕಂಚು ಪದಕಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ವಿಜೇತರನ್ನು ರಾಜ್ಯ ಮಾಸ್ಟರ್ ಅಥ್ಲೆಟಿಕ್ ಸಂಸ್ಥೆಯ ಜಂಟೀ ಕಾರ್ಯದರ್ಶಿ ಎಚ್.ಸಿ.ಷಣ್ಮುಗಂ ಅಭಿನಂದಿಸಿದ್ದಾರೆ.

ಪರೀಕ್ಷಾ ಕೇಂದ್ರಸುತ್ತಮುತ್ತ ನಿಷೇಧಾಜ್ಞೆ
ಮಾಗಡಿ: ಜು.3  ರಿಂದ 12 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ  ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ  ಎಂದು ತಹಸೀಲ್ದಾರ್  ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರ ಸಮೀಪದಲ್ಲಿರುವ ಜೆರಾಕ್ಸ್  ಅಂಗಡಿಗಳನ್ನು ಮುಚ್ಚುಲು, ಅಂಗಡಿ ಮಾಲೀಕರುಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದರು.

ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ರಾಮನಗರ: 2013-14ನೇ ಸಾಲಿನಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಾನೂನು ಪದವೀಧರರನ್ನು ನ್ಯಾಯಾಂಗ ಆಡಳಿತ ಹಾಗೂ ವಕೀಲ ವೃತ್ತಿಯ 4 ವರ್ಷಗಳ ತರಬೇತಿಗೆ ಆಯ್ಕೆ ಮಾಡಲು ಹಿಂದುಳಿದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ (2ಬಿ) ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸದರಿ ಕಚೇರಿಗೆ ಜು.17ರೊಳಗೆ ಹಿಂದಿರುಗಿಸುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕಾನೂನು ಪದವಿ ನಮೂದಿಸಿ 2 ವರ್ಷ ಮೀರಿರಬಾರದು. ಪ್ರವರ್ಗ 1ನ್ನು ಹೊರತುಪಡಿಸಿ ಇತರೆ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರು.15 ಸಾವಿರ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿದ್ದು, ಅಭ್ಯರ್ಥಿಗಳು ಬಾರ್ ಕೌನ್ಸಿಲ್‌ನಲ್ಲಿ ಹೆಸರನ್ನು ನೋಂದಾಯಿಸಿರಬೇಕು. ವಯೋವುತಿ 30 ವರ್ಷ ಮೀರಿರಬಾರದು. ಪ್ರವರ್ಗ 1ರ ಅಭ್ಯರ್ಥಿಗಳಿಗೆ 31 ವರ್ಷ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ರು.1000 ತರಬೇತಿ ಭತ್ಯೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಮನಗರ ಜಿಲ್ಲೆ, ಪಿಎಲ್‌ಡಿ ಬ್ಯಾಂಕ್ ರಸ್ತೆ, ಐಜೂರು, ರಾಮನಗರ ಇವರನ್ನು ಸಂಪರ್ಕಿಸುವುದು.

ಇಂದು ಗ್ರಾಹಕರ ಸಂವಾದ ಸಭೆ
ರಾಮನಗರ: ಬೆಸ್ಕಾನಿಂದ ಜು.3ರಂದು ಮಧ್ಯಾಹ್ನ 3ಕ್ಕೆ ರಾಮನಗರ ನಗರ ಉಪ ವಿಭಾಗದ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಈ ಸಭೆಯಲ್ಲಿ ಸಲ್ಲಿಸಬಹುದು ಎಂದು ಬೆಸ್ಕಾಂನ ಉಪವಿಭಾಗದ ಎಇಇ ತಿಳಿಸಿದ್ದಾರೆ.

ನಿವೃತ್ತ ಶಿಕ್ಷಕ ರಂಗಸ್ವಾಮಿ
ಮಾಗಡಿ: ಪಟ್ಟಣದ ಕೊಟ್ಟಣಬೀದಿ ವಾಸಿ ನಿವೃತ್ತ ಮುಖ್ಯಶಿಕ್ಷಕ ರಂಗಸ್ವಾಮಿ (67) ಹೃದಯಾಘಾತದಿಂದ ಸೋಮವಾರ ನಿಧನರಾದರು.
ಅವರಿಗೆ ಪತ್ನಿ, ಡಾ.ಕೇಶವಮೂರ್ತಿ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಅವರು ಹಿಂದೆ ಕೊಟ್ಟಣಬೀದಿಯಲ್ಲಿರುವ ಪ್ರಸಿದ್ಧ ಗ್ರಾಮದೇವತೆ ಮಾರಮ್ಮ ದೇವಾಲಯದ ಟ್ರಸ್ಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಪುರಸಭಾ ಸದಸ್ಯೆ ನಿರ್ಮಲಾ ಪಿ.ವಿ. ಸೀತಾರಂ,   ದೇವಾಲಯದ ಟ್ರಸ್ಟಿ ನಿರ್ದೇಶಕರಾದ ಕುಮಾರಸ್ವಾಮಿ, ಮುದ್ದಹನುಮಯ್ಯ, ಹನುಮಯ್ಯ, ಪುಟ್ಟರಂಗಮ್ಮ, ನಿವೃತ್ತ ಮುಖ್ಯಶಿಕ್ಷಕ ಸಿದ್ದಗಂಗಯ್ಯ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಂಸ್ಥೆಗಳು ಸಮಾಜದ ಏಳ್ಗೆಗಾಗಿ ಶ್ರಮಿಸಲಿ
ಆನೇಕಲ್ಲು:ಸಂಘಟನೆಗಳು ಹೋರಾಟದ ಜೊತೆಗೆ ಬಡವರ ಹಾಗೂ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಪ್ರಜಾ ವಿಮೋಚನಾ ಚಳುವಳಿ (ಸಮತಾವಾದ) ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ತಿಳಿಸಿದರು.ಅವರು ಆನೇಕಲ್ ತಾಲೂಕಿನ ರಾಯಸಂದ್ರ ಹಾಗೂ ನಾಗನಾಥಪುರದಲ್ಲಿ ಸಂಘಟನೆಯ ನೂತನ ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿ  ದೇಶದಲ್ಲಿ  ಅಸಮಾನತೆ, ಅಸ್ಪೃಶ್ಯತೆ ಜೊತೆಗೆ ಭ್ರಷ್ಟಾಚಾರ ಸೇರಿಕೊಂಡು ಬಡವರು ಬಡವರಾಗಿಯೇ ಉಳಿದಿದ್ದಾರೆ.
ತೋಳ್ಬಲ ಇದ್ದವರು ಹಿಂಬಾಗಿಲ ಮೂಲಕ ಸ್ವಾರ್ಥ ಮೆರೆಯುತ್ತಾರೆ. ಪಿವಿಸಿ(ಎಸ್) ಸಮಾನತೆ ಹಾಗೂ ಸಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು ಯುವ ಜನತೆ ಗ್ರಾಮಗಳ ಸಮಸ್ಯೆಯ ನಿವಾರಣೆಗೆ ಹೋರಾಟ ಮಾಡಬೇಕೆಂದು ಕರೆ ನೀಡಿದರು. ತಾಲೂಕಿನಲ್ಲಿ 3 ಬಾರಿ ಗೆದ್ದು ಬಿಜೆಪಿ ಶಾಸಕರು ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಮಾಡುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ನೂತನ ಶಾಸಕ ಬಿ.ಶಿವಣ್ಣನವರು ಡಾ. ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜಿನಪ್ಪ ಮಾತನಾಡಿ  ಇಂದಿನ ಶಿಕ್ಷಣ ವ್ಯಾಪಾರೀಕರಣವಾಗಿದ್ದು, ಹಣ ಇದ್ದವರಿಗೆ ಮಾತ್ರ ಉತ್ತಮ ಶಿಕ್ಷಣ ಎಂಬ ಧೋರಣೆ ತೊಲಗಬೇಕು. ಬಡವ ಹಾಗೂ ಬಲ್ಲಿದ ಎಂಬ ಭೇದ ಭಾವ  ತೊರೆದು ಎಲ್ಲರಿಗೂ ಉತ್ತಮ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕೆಂದರು. ಬೆಂಗಳೂರು ವಿಭಾಗದ ಶಾಖಾ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಶಂಕರ್, ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್. ಭಾಸ್ಕರ್, ಬೆಂಗಳೂರು ವಿಭಾಗ ಶಾಖೆಯ ಅಧ್ಯಕ್ಷ ಬಸವರಾಜು, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಮುನಿಕೃಷ್ಣಪ್ಪ, ನಗರ ಜಿಲ್ಲಾ ಕಾರ್ಯಧ್ಯಕ್ಷ ವೈ. ಕೃಷ್ಣಪ್ಪ, ನಾಗರಾಜು, ಕೊಪ್ಪ ರಾಂಮಾಜಿ, ಭವಾನಿ, ಪ್ರಸಾದ್, ಪ್ರವೀಣ್, ಮತ್ತು ಗಜೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಜು.5 ರಂದು ಪಥ ಸಂಚಲನ
ಚನ್ನಪಟ್ಟಣ: ಇಲ್ಲಿನ ರಾಜ್ಯ ಪೊಲೀಸ್ ತರಬೇತಿ ಶಾಲೆಯ ವತಿಯಿಂದ 2ನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥಸಂಚಲನ  ಶುಕ್ರವಾರ ಶಾಲೆಯ ಕವಾಯತ್ತು ಮೈದಾನದಲ್ಲಿ ನಡೆಯಲಿದೆ.  
 ಗೃಹಸಚಿವ ಕೆ.ಜೆ.ಜಾರ್ಜ್ ಪಥಸಂಚಲನ ಪರಿವೀಕ್ಷಣೆ ಮತ್ತು ಬಹುಮಾನ ವಿತರಣೆ ಮಾಡಲಿದ್ದು, ಪೊಲೀಸ್ ಮಹಾನಿರ್ದೇಶಕ ಲಾಲ್ ರುಖುಮಾ ಪಚಾವೋ, ತರಬೇತಿ ವಿಭಾಗದ ಮಹಾನಿರ್ದೇಶಕ ಸುಶಾಂತಮಹಾಪಾತ್ರ, ತರಬೇತಿ ವಿಭಾಗದ ಮಹಾನಿರೀಕ್ಷಕ ಡಾ.ಎಸ್. ಪರಶಿವಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಎಂ.ಎಸ್. ಇಂದುಶೇಖರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement