ಅಪಘಾತ ಸ್ಥಳಕ್ಕೆ ಪೊಲೀಸರ ವಿಳಂಬ ಖಂಡಿಸಿ ಪ್ರತಿಭಟನೆ, ಲಾಠಿ ಪ್ರಹಾರ
ರಾಮನಗರ: ಅಪಘಾತ ಸ್ಥಳಕ್ಕೆ ಆಂಬ್ಯುಲೆನ್ಸ್ ಹಾಗೂ ಪೊಲೀಸರ ವಿಳಂಬ ಖಂಡಿಸಿ ರೊಚ್ಚಿಗೆದ್ದ ರಸ್ತೆ ತಡೆಗಿಳಿದ ಸಾರ್ವಜನಿಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ರಾಮನಗರ ಹೊರವಲಯದ ರಾಮದೇವನಬೆಟ್ಟ ರಸ್ತೆ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ರಸ್ತೆಯಲ್ಲಿನ ಹಂಪ್ ದಾಟುವಾಗ ದ್ವಿಚಕ್ರವಾಹನ ಸವಾರರೊಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡರು. ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ಗೆ ದೂರವಾಣಿ ಮೂಲಕ ತಿಳಿಸಿದರು. ಅರ್ಧಗಂಟೆ ಕಳೆದರೂ ಯಾರೂ ಬರಲಿಲ್ಲ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರು ವಾಹನ ಸಂಚಾರಕ್ಕೆ ತಡೆಒಡ್ಡಿ ಪ್ರತಿಭಟಿಸಿದರು. ಸ್ವಲ್ಪ ಸಮಯದ ನಂತರ ಪೊಲೀಸರು ಬಂದರು. ಲಾಠಿ ಪ್ರಹಾರ ನಡೆಸಿ ವಾಹನ ಸಂಚಾರ ಸುಗಮ ಗೊಳಿಸಿದರು. ಗಾಯಾಳುವನ್ನು ನಂತರ ಆಸ್ಪತ್ರೆಗೆ ಸೇರಿಸಲಾಯಿತು.