ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ಆರಂಭ
ದೇವನಹಳ್ಳಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯ ಪ್ರಾರಂಭೋತ್ಸವವನ್ನು ಇಲ್ಲಿನ ವಿಜಯಪುರ ಕ್ರಾಸ್ ಬಳಿ ಇರುವ ರಮೇಶ್ ಅವರ ಕಟ್ಟಡದಲ್ಲಿ ಶಾಸಕರಾದ ಪಿಳ್ಳಮುನಿಶಾಮಪ್ಪ ಭಾನುವಾರ ಚಾಲನೆ ನೀಡಿದರು.
ಬಹುತೇಕ ಭಕ್ತರಿಗೆ ಧರ್ಮಸ್ಥಳ ಅಂದರೆ ತುಂಬ ಭಕ್ತಿ. ಆ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಯಾವುದೇ ಕಾರ್ಯಕ್ರಮ ಗ್ರಾಮೀಣ ಜನರ ಸರ್ವಾಂಗೀಣ ಅಭಿವೃದ್ಧಿಯೇ ಆಗಿರುತ್ತದೆ.
ಈ ಸಂಸ್ಥೆ ಸರ್ಕಾರಕ್ಕಿಂತ ಮಿಗಿಲಾದ ಕಾರ್ಯಗಳನ್ನು ನಿರ್ವಹಿಸುತ್ತಿವೆ ಎಂದರಲ್ಲದೆ ಸಂಸ್ಥೆಯವರ ಯೋಜನೆಯ ಲಾಭ ತಾಲೂಕಿನ ಎಲ್ಲ ಗ್ರಾಮಗಳಿಗೆ ತಲುಪುವುಂತಾಗಲಿ. ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರಲ್ಲದೆ ಎಲ್ಲ ಜಾತಿಗಳಲ್ಲೂ ಬಡವರು ಇರುತ್ತಾರೆ. ಅವರು ಆರ್ಥಿಕವಾಗಿ ಮುಂದೆ ಬರಬೇಕು. ಈ ಸಂಸ್ಥೆಯವರ ಪ್ರಯೋಜನ ಪಡೆಯಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅವರು ವಹಿಸಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಯ ಶಾಖೆ ದೇವನಹಳ್ಳಿಯಲ್ಲಿ ಆರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಮುಖವಾಗಿ ಇದು ಗ್ರಾಮೀಣ ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಲಿದೆ. ಅಲ್ಲದೆ ಸಾಮಾಜಿಕ ಪರಿವರ್ತನೆಯೇ ಯೋಜನೆಯ ಗುರಿಯಾಗಿದೆ. ಧರ್ಮಸ್ಥಳದ ಈ ಗ್ರಾಮಾಭಿವೃದ್ಧಿ ಯೋಜನೆ ಕೇವಲ ರಾಜ್ಯದಲ್ಲಷ್ಟೇ ಅಲ್ಲ ವಿಶ್ವದ ಗಮನ ಸೆಳೆದಿದೆ ಎಂದರು.
608 ಕೋಟಿ ರು.ಸಂಗ್ರಹಣೆ: ಯೋಜನೆಯ ಜಿಲ್ಲಾ ನಿರ್ದೇಶಕರಾದ ಶಿವಾನಂದಾಚಾರ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದ 16 ಜಿಲ್ಲೆಗಳಲ್ಲಿ 2ಲಕ್ಷ 20 ಸಾವಿರ ಸ್ವಸಹಾಯ ಗುಂಪುಗಳಿದ್ದು 608 ಕೋಟಿ ರು.ಸಂಗ್ರಹಣೆಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯಂತೆ ಜನ ಸಂಘಟನೆ ಮತ್ತು ಸ್ವಸಹಾಯ ಸಂಘ ರಚನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಕಾರ್ಯಕ್ರಮಗಳು, ಕೃಷಿ ತರಬೇತಿ, ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡುವ ಯೋಜನೆ ಸಹ ಹೊಂದಿದೆ ಎಂದರು.
ಸಮಾರಂಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಸ್ಎಲ್ಎನ್ ಮುನಿರಾಜು, ಹಾರೋಹಳ್ಳಿ ಗ್ರಾಮಾ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಮುಖಂಡರಾದ ಸುಬ್ಬೇಗೌಡ, ಎಸ್.ರಮೇಶ್ ಉಪಸ್ಥಿತರಿದ್ದರು. ಯೋಜನಾಧಿಕಾರಿಗಳಾದ ಸುರೇಶ್ ಸ್ವಾಗತ ಕೋರಿದರು.