ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರತಿ ಟನ್ ಕಬ್ಬಿಗೆ ರು. 60 ಪ್ರೋತ್ಸಾಹ ಧನ

Vishwanath S
Updated On : 8 Jul 2013, 1:02 am

ಕ.ಪ್ರ.ವಾರ್ತೆ  ,  ರಾಮನಗರ  ,  ಜು.7
ಬಿಡದಿ ಬಳಿಯ ಎಸ್‌ಪಿಆರ್ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರೋತ್ಸಾಹ ಧನದವನ್ನು ಪ್ರತಿ ಟನ್‌ಗೆ ರು.60 ರಂತೆ ನೀಡಲು ಸಮ್ಮತಿಸಿದೆ.
ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಡಾ.ಎಂ.ಎನ್.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ನಡುವೆ ನಡೆದ ಸಭೆಯಲ್ಲಿ ಎಸ್‌ಪಿಆರ್ ಮಾಲೀಕ ತಿಮ್ಮೇಗೌಡ ಪ್ರೋತ್ಸಾಹ ಧನ ನೀಡಲು ಒಪ್ಪಿಕೊಂಡಿದ್ದಾರೆ.
ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ ಕಬ್ಬಿಗೆ ಹೆಚ್ವುವರಿ ರು.100 ಹಣ ನೀಡುವಂತೆ ಪಟ್ಟುಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕ ತಿಮ್ಮೇಗೌಡರು, ಒಳ್ಳೆಯ ಉದ್ದೇಶದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದೆ, ಆದರೆ ನಷ್ಟದಲ್ಲೇ ನಡೆಯಿತು. ನಷ್ಟ ಹೆಚ್ಚಾಗಿದ್ದರಿಂದ ಕಾರ್ಖಾನೆಯನ್ನು ಸ್ಥಗಿತಗೊಳಿಸಿದ್ದೇನೆ. ಹೆಚ್ಚುವರಿ ಹಣ ನೀಡಲು ಸಾಧ್ಯವಿಲ್ಲ ಎಂದರು. ಸುದೀರ್ಘ ಚರ್ಚೆಯ ನಂತರ ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್ ಪ್ರತಿ ಟನ್‌ಗೆ ರು.60 ಹೆಚ್ಚುವರಿ ಹಣ ನೀಡುವಂತೆ ಸಲಹೆ ನೀಡಿದರು. 15 ದಿನದೊಳಗೆ ಈ ಹಣವನ್ನು ತಲುಪಿಸುವಂತೆ ಷರತ್ತು ವಿಧಿಸಿದರು. ಇದಕ್ಕೆ ಕಬ್ಬು ಬೆಳೆಗಾರರು ಮತ್ತು ಮಾಲೀಕರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡರು. ಇದರಿಂದ ಬೆಳೆಗಾರರು ಮತ್ತು ಮಾಲೀಕರ ನಡುವಿನ ಸಮರ ತಾರ್ಕಿಕ ಅಂತ್ಯ ಕಂಡಿದೆ.
ಹಿನ್ನಲೆ: ಎಸ್‌ಪಿಆರ್ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಹಣ ನೀಡುವಂತೆ  ಬೆಳೆಗಾರರು ಕಳೆದ ಒಂದು ವರ್ಷದಿಂದ ಆಗ್ರಹಿಸುತ್ತಲೇ ಇದ್ದರು.
ಈ ಮಧ್ಯೆ ಕಾರ್ಖಾನೆ ಸ್ಥಗಿತಗೊಂಡಿತ್ತು. ಕೆಲವು ವಾರಗಳ ಹಿಂದೆ, ಸ್ಥಗಿತಗೊಂಡಿದ್ದ ಕಾರ್ಖಾನೆಯ ಯಂತ್ರೋಪಕರಣಗಳನ್ನು ಕಾರ್ಖಾನೆಯ ಆವರಣದಿಂದ ಹೊರಗೆ ಸಾಗಿಸುತ್ತಿರುವುದನ್ನು ಕಂಡ ಬೆಳೆಗಾರರು ತಮ್ಮ ಬಾಕಿ ತೀರಿಸಿ ನಂತರ ಯಂತ್ರಗಳನ್ನು ಸಾಗಿಸುವಂತೆ ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್ ರೈತ ಸಂಘ, ಕಬ್ಬು ಬೆಳೆಗಾರರು ಮತ್ತು ಮಾಲೀಕರ ನಡುವೆ ಜು.3ರಂದು ಸಂಧಾನ ಸಭೆ ನಡೆಸಿದ್ದರು. ಆದರೆ ಸ್ಪಷ್ಟ ತೀರ್ಮಾನಕ್ಕೆ ಬರುವಲ್ಲಿ ವಿಫಲರಾಗಿ, ಶನಿವಾರ ಮತ್ತೆ ಸಭೆ ನಡೆಸಿ ಸಮಸ್ಯೆಯನ್ನು ಪರಸ್ಪರರು ಬಗೆಹರಿಸಿಕೊಂಡಿದ್ದಾರೆ.
ಸಭೆಯಲ್ಲಿ ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಲಕ್ಷ್ಮಣಸ್ವಾಮಿ, ಕರೀಗೌಡ, ಸೀಬಕಟ್ಟೆ ಕೃಷ್ಣಪ್ಪ, ಭೈರೇಗೌಡ, ಶಾಂತರಾಜು, ಆನಂದ ಪ್ರಸಾದ್, ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement