ಮಾನವೀಯ ಮೌಲ್ಯ ಬೆಳೆಸಿ: ಉಜ್ಜಯನಿ ಶ್ರೀ
ಆನೇಕಲ್: ವಿಜ್ಞಾನ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು ಮಾನವನ ಎಲ್ಲ ಆಸೆಗಳೂ ಈಡೇರುತ್ತಿವೆ. ಆದರೆ ಹುಲು ಮಾನವ ಮಾತ್ರ ಮಾನವೀಯ ಮೌಲ್ಯಗಳನ್ನು ಮರೆತು ಸ್ವಾರ್ಥದಲ್ಲಿ ಮುಳುಗಿ ಸಮಾಜಘಾತುಕ ಕೆಲಸದಲ್ಲಿ ನಿರತನಾಗಿರುವುದು ದುರದೃಷ್ಟಕರ ಎಂದು ಉಜ್ಚಯನಿ ಕ್ಷೇತ್ರದ ಸಿದ್ದಲಿಂಗರಾಜ ದೇಶಿಕೇಂದ್ರಸ್ವಾಮಿಯವರು ವಿಷಾದ ವ್ಯಕ್ತ ಪಡಿಸಿದ್ದಾರೆ.
ಅವರು ಬೆಂಗಳೂರು ದಕ್ಷಿಣ ರಾಜಾಪುರ ಕ್ಷೇತ್ರದಲ್ಲಿ ನಡೆದ ಲಿಂಗೈಕ್ಯ ರೇಣುಕಾ ಶಿವಾಚಾರ್ಯ ಸ್ವಾಮಿಯವರ ಸಂಸ್ಮರಣೋತ್ಸವ ಮಹೋತ್ಸವ, ಇಷ್ಟಲಿಂಗಪೂಜೆ ನೆರವೇರಿಸಿ ಮಾತನಾಡಿದರು.
ದಾನ ಧರ್ಮ ಮಾನವರನ್ನು ಮಾನವರಂತೆ ಗೌರವಿಸುವುದು, ತಂದೆ ತಾಯಿಯರನ್ನು ಗೌರವದಿಂದ ನೋಡುವುದು, ಕಷ್ಟದಲ್ಲಿರುವ ವರಿಗೆ ಸಹಾಯ ಹಸ್ತ ನೀಡುವುದು ಮಾನವೀಯ ಧರ್ಮ. ಇದು ನಮ್ಮ ಸಂಸ್ಕಾರವೂ ಹೌದು. ಜನತೆ ವೈಜ್ಞಾನಿಕ ಯುಗದಲ್ಲಿ ದಾಪುಗಾಲು ಹಾಕುತ್ತಿದ್ದು ಸಾಮಾಜಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶ್ರೀ ಪೀಠದ ಗುರುಗಳು ಶಿಷ್ಯ ಕೋಟಿಯನ್ನು ಬೆಳೆಸಬೇಕು. ಅವರಿಗೆ ಗುರು ಪರಂಪರೆ ಹಾಗೂ ದೇಶೀಯ ಸಂಸ್ಕಾರವನ್ನು ಕಲಿಸಬೇಕೆಂದರುರು.
ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್. ಎಸ್. ಬಸವರಾಜು ಮಾತನಾಡಿ ಲಿಂಗೈಕ್ಯ ಸ್ವಾಮೀಜಿಯವರು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸಂಚರಿಸಿ ಸನಾತನ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಧರ್ಮ ಪ್ರವಚನಾಚಾರ್ಯ ಬಿರುದಾಂಕಿತರಾಗಿದ್ದರು. ಅಕ್ಷರ ದಾಸೋಹ, ಅನ್ನದಾಸೋಹ ಹಾಗೂ ಧರ್ಮ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು ಎಂದರು.
ವೇದಿಕೆಯಲ್ಲಿ 200 ಜನ ಗ್ರಾಮಸ್ಥರಿಗೆ ಉಚಿತ ನಿವೇಶನ ಹಕ್ಕು ಪತ್ರ ನೀಡಿಕೆಯನ್ನು ಶಾಸಕ ಬಿ. ಶಿವಣ್ಣ ಮತ್ತು ಅನ್ನದಾನಿ ನಟರಾಜು ನೆರವೇರಿಸಿದರು.
ಗುಮ್ಮಳಾಪುರದ ಶಿವಾನಂದ ಸ್ವಾಮೀಜಿ, ಬೆಳ್ಳಾವಿ ಶ್ರೀಗಳು, ಮುಖಂಡರಾದ ಜಿಗಣಿ ಶಂಕರ್, ಪ್ರಕಾಶ್ ಸೇರಿದಂತೆ ಅನೇಕ ಮುಖಂಡರಿದ್ದರು.