ಸರ್ಕಾರಿ ಶಾಲೆ: ಕೊಠಡಿ ಕೊರತೆ
ವಿಜಯಪುರ: ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಡಶಾಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕಾಲೇಜು ಮತ್ತು ಶಾಲೆಗೆ ಇರುವ ಕೊಠಡಿಗಳಲ್ಲೇ ಸಮಯವನ್ನು ಹೊಂದಿಸಿಕೊಂಡು ಪಾಠ ಮಾಡುವುದು ತುಂಬಾ ಸಮಸ್ಯೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಶಂಕರ್ ಹೆಗಡೆ ತಿಳಿಸಿದರು.
ಅವರು ಪಟ್ಟಣದಲ್ಲಿ ನಡೆದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಕುಂದು ಕೊರತೆ ಸಭೆಯಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಅವರಿಗೆ ಕಾಲೇಜಿನ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಪ್ರೌಢಶಾಲೆ ಮತ್ತು ಕಾಲೇಜಿಗೆ ಒಂದೇ ಕಟ್ಟಡವಿದ್ದು ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ 500ಕ್ಕೂ ಹೆಚ್ಚಿದೆ. ಕೊಠಡಿಗಳ ಕೊರತೆಯಿಂದಾಗಿ ಬೆಳಗ್ಗೆ 8 ರಿಂದ12 ಗಂಟೆಯೊಳಗೆ ಕಾಲೇಜು ತರಗತಿಗಳನ್ನು ಮುಗಿಸಿ ನಂತರ ಪ್ರೌಢಶಾಲಾ ಮಕ್ಕಳಿಗೆ ಕೊಠಡಿಗಳನ್ನು ತೆರವುಗೊಳಿಸಬೇಕಿದೆ. ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳು ಬಹುಬೇಗ ಪ್ರಾರಂಭವಾಗುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತರಗತಿಗಳಿಗೆ ಹಾಜರಾಗಲು ತೊಂದರೆಯುಂಟಾಗಿದೆ.
ಇತರೆ ಕಾಲೇಜುಗಳು ಬೆಳಗ್ಗೆ 10ರಿಂದ 4ರವರೆಗೆ ನಡೆದರೆ ಕೊಠಡಿಗಳ ಕೊರತೆಯಿಂದಾಗಿ ಎರಡು ಪಾಳಿಯಲ್ಲಿ ಶಾಲೆ ಮತ್ತು ಕಾಲೇಜು ತರಗತಿಗಳನ್ನು ನಡೆಸಬೇಕಿದೆ ಎಂದರು. ಉಪಪ್ರಾಂಶುಪಾಲ ರಾಮಚಂದ್ರ ಮಾತನಾಡಿ ಶಾಲೆಯಲ್ಲಿ ಒಟ್ಟು 730 ವಿದ್ಯಾರ್ಥಿಗಳಿದ್ದು,14 ಕೊಠಡಿಗಳು ಮಾತ್ರ ಇವೆ. ಒಂದೊಂದು ಕೊಠಡಿಯಲ್ಲಿ 80 ರಿಂದ 90 ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ವಿಜ್ಞಾನ ಪ್ರಯೋಗ ಶಾಲೆ, ಗ್ರಂಥಾಲಯದ ಕೊರತೆ ಇದೆ. ವಿಶೇಷ ತರಗತಿಗಳನ್ನು ನಡೆಸಲು
ಮರದ ನೆರಳನ್ನೇ ಅಶ್ರಯಿಸಬೇಕಾಗಿದೆ. ಆದ್ದರಿಂದ ತಕ್ಷಣವೇ ಹೆಚ್ಚುವರಿಯಾಗಿ 3 ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಸಮಸ್ಯೆಗಳನ್ನು ಆಲಿಸಿದ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಮುಂದಿನ ಆರು ತಿಂಗಳಲ್ಲಿ ಕೊಠಡಿ ನಿರ್ಮಾಣಕ್ಕೆ ವ್ಯವಸ್ಥೆಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬೂದಿಹಾಳ ಮುನಿಶ್ಯಾಮಗೌಡ, ಕಾರ್ಯದರ್ಶಿ ರವೀಂದ್ರ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ವೀರಭದ್ರಯ್ಯ, ಪುರಸಭಾ ಸದಸ್ಯ ಭಾಸ್ಕರ್, ಚಿ.ಮಾ.ಸುಧಾಕರ್, ಸದಾಶಿವಪ್ಪ ಮತ್ತಿತರರು ಇದ್ದರು.