ಹಳ್ಳಿಗರಿಗೆ ಉಚಿತ ಆರೋಗ್ಯ ಸೇವೆ ನಮ್ಮ ಉದ್ದೇಶ
ಕ.ಪ್ರ.ವಾರ್ತೆ , ರಾಮನಗರ , ಜು. 7
ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ಆರೋಗ್ಯ ಸಮಾಜ ನಿರ್ಮಾಣ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಬಿಡದಿ ಸೆಂಟ್ರಲ್ ರೋಟರಿ ಅಧ್ಯಕ್ಷ ಬಿ.ಎನ್.ನಟರಾಜ್ ತಿಳಿಸಿದರು.
ಬಿಡದಿಯ ಮಂಜುನಾಥ ಕಲ್ಯಾಣ ಮಂದಿರದಲ್ಲಿ ರೋಟರಿ ಬಿಡದಿ ಸೆಂಟ್ರಲ್ನವರು ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ನ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಬಡವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಎಂದರು.
ಆರೋಗ್ಯ ಸೇವೆಗಳು ದಿನೇ ದಿನೇ ದುಬಾರಿಯಾಗುತ್ತಿದ್ದು, ಬಡ ಜನರ ಕೈಗೆಟುಕದಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ನೆರವಾಗುವ ಉದ್ದೇಶದಿಂದ ಕಳೆದ ಒಂದು ವರ್ಷದಿಂದ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಹೃದಯ ಸಂಬಂಧಿ ಕಾಯಿಲೆಗೆ ಇಸಿಜಿ, ಎಕೋ ತಪಾಸಣೆ ಮಾಡಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ರು.1 ಸಾವಿರ ಖರ್ಚಾಗುತ್ತದೆ. ಬಡಜನರು ಇಷ್ಟೊಂದು ದುಬಾರಿ ವೆಚ್ಚ ತೆತ್ತು ತಪಾಸಣೆ ಮಾಡಿಸಿಕೊಳ್ಳುವುದು ಸಾಧ್ಯವಿಲ್ಲ. ಇಂತಹ ಉಚಿತ ಆರೋಗ್ಯ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ವಾರ್ಥ ಹೆಚ್ಚಿದೆ: ಇಂದಿನ ಸಮಾಜದಲ್ಲಿ ಸ್ವಾರ್ಥತೆ ಹೆಚ್ಚಿದೆ. ಜನರು ತಾವು ಮತ್ತು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಉಳ್ಳವರು ತಮ್ಮ ಗಳಿಕೆಯ ಸ್ವಲ್ಪ ಭಾಗವನ್ನಾದರೂ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡಬೇಕು. ಇದರಿಂದ ಸ್ವಲ್ಪ ಮಟ್ಟಿಗಾದರೂ ಬಡಜನರಿಗೆ ಸಹಾಯವಾಗುತ್ತದೆ ಎಂದರು.
ಶಿಬಿರದಲ್ಲಿ ಹೃದಯರೋಗ, ಸ್ತ್ರೀರೋಗ, ಮೂಳೆ ರೋಗ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಎಕೋ, ಇಸಿಜಿ ಹಾಗೂ ಮಕ್ಕಳಿಗೆ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ವಿಕಾಸ್, ಡಾ.ಶಾಲಿನಿ, ಶಶಿಕಲಾ, ಡಾ.ಶ್ರೀಮಂತ್ ತಪಾಸಣೆ ನಡೆಸಿದರು. ಬಿಡದಿಯ ಔಷಧ ವ್ಯಾಪಾರಿಗಳ ಸಂಘದಿಂದ ಉಚಿತ ಔಷಧಗಳನ್ನು ವಿತರಿಸಲಾಯಿತು.
1176 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ 29 ಮಂದಿಗೆ ಹೃದಯ ಹಾಗೂ ಇಬ್ಬರಿಗೆ ಮೂಳೆ ರೋಗಕ್ಕೆ ಶಸ್ತ್ರ ಚಿಕಿತ್ಸೆ ಅವಶ್ಯವಿದ್ದು, ಅವರಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಬಿ.ಎಂ. ರಮೇಶ್ ಕುಮಾರ್, ಬಿ.ಎನ್.ಲೋಕೇಶ್, ಬಿ.ಎಂ.ಶ್ರೀವತ್ಸ, ಅಜ್ಗರ್ ಉಲ್ಲಾ, ಶಿವಣ್ಣ, ಶಿವಶಂಕರ್, ಎಚ್.ಎನ್. ಲೋಕೇಶ್, ಶಶಿಕಲಾ, ಆನಂದ್ಕುಮಾರ್, ಕುಮಾರ್, ಕುಮಾರಸ್ವಾಮಿ, ಎಂ.ಎಚ್.ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.