ಅಕ್ರಮ ಮದ್ಯ: ಕಠಿಣ ಕ್ರಮದ ಎಚ್ಚರಿಕೆ
ಚನ್ನಪಟ್ಟಣ: ಪ್ರತಿ ಗ್ರಾಮಗಳಲ್ಲಿ ಎಲ್ಲ ಅಂಗಡಿ ಮುಗ್ಗಟ್ಟಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದು ಕಾನೂನು ಬಾಹಿರವಾಗಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರು ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಮುನಿಯಪ್ಪನದೊಡ್ಡಿ ಸರ್ಕಾರಿ ಆರ್.ಎಂ.ಎಸ್.ಎ. ಪ್ರೌಢಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪೋಷಕರ ಮನಮೊಲಿಸಿ ಮದ್ಯಪಾನ ಮಾಡದಂತೆ ಮನವರಿಕೆ ಮಾಡಿಸಬೇಕೆಂದು ಕರೆ ನೀಡಿದರು. ಮುನಿಯಪ್ಪನದೊಡ್ಡಿ ಪ್ರೌಢಶಾಲೆಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅಡಿಯಲ್ಲಿ ಎಪ್ಪತ್ತೆರಡು ಲಕ್ಷ ಮಂಜೂರಾಗಿದ್ದು, 10 ಕೊಠಡಿಗಳು ನಿರ್ಮಾಣವಾಗಲಿದೆ ಎಂದು ತಿಳಿಸಿದರು. ಶಾಲೆಯು ಮೊದಲು ಗುಡಿಸಲಿನಲ್ಲಿ ತರಗತಿ ನಡೆಯುತ್ತಿದ್ದು, ಇಂದು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದೆ ಎಂದರು.
ಮುನಿಯಪ್ಪನದೊಡ್ಡಿ ಗ್ರಾಮ ಅತಿವೇಗವಾಗಿ ಬೆಳೆಯುತ್ತಿದ್ದು, ನಗರ ಪ್ರದೇಶಕ್ಕೆ ಹತ್ತಿರವಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಆಸೆಯಂತೆ ಗಂಗಾನಗರ ಮಾಡುವುದಾಗಿ ತಿಳಿಸಿದರು. ಈ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು, ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಹಾಗೂ ಸಮನ್ವಯದಿಂದ ಒಳ್ಳೆಯ ಫಲಿತಾಂಶ ಬರುತ್ತಿರುವುದು ಅವರ ಕಾರ್ಯಕ್ಷಮತೆಯನ್ನು ಎತ್ತಿ ಹಿಡಿದಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಶಿವಣ್ಣ, ಹಾಲಿ ಗ್ರಾ.ಪಂ.ಸದಸ್ಯರಾದ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಪ್ಪ, ಗ್ರಾಮದ ಯಜಮಾನರುಗಳಾದ ದೊಡ್ಡಯಪ್ಪ, ದಾಸಪ್ಪ, ರಾಮಕೃಷ್ಣ, ಮುಖಂಡರಾದ ದೇಶಿಯಣ್ಣ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗೇಶ್, ಪ್ರಭಾರಿ ಮುಖ್ಯ ಶಿಕ್ಷಕರಾದ ಗಂಗಾಧರ ಮೂರ್ತಿ ಇದ್ದರು.