ಅರಣ್ಯ ಹಕ್ಕಿನ ಕಾಯ್ದೆ ಅನುಷ್ಠಾನಕ್ಕೆ ತನ್ನಿ
ಕ.ಪ್ರ.ವಾರ್ತೆ ರಾಮನಗರ ಜು.8
ಆದಿವಾಸಿಗಳ ಅರಣ್ಯ ಹಕ್ಕಿನ ಕಾಯ್ದೆಯನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ಗಿರಿಜನ ಕ್ರಿಯಾಕೂಟ ಸಂಘಟನೆ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಅರಣ್ಯ ಹಕ್ಕಿನ ಕಾಯ್ದೆ ಜಾರಿಗೆ ಬಂದು 7 ವರ್ಷ ಕಳೆದಿದ್ದರೂ ಅನುಷ್ಠಾನ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಈ ಸಂಬಂಧ ಹಿಂದಿನ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಹಲವಾರು ಮನವಿ ಸಲ್ಲಿಸಿ, ಹೋರಾಟಗಳನ್ನು ನಡೆಸಲಾಗಿದೆ. ಆದರೂ ಕೂಡ ಕಾಯ್ದೆ ಜಾರಿಯಾಗಿಲ್ಲ ಎಂದು ವಿಷಾದಿಸಿದ್ದಾರೆ.
ಆದಿವಾಸಿಗಳ ಅಭಿವೃದ್ಧಿಗೆ ವಿಶೇಷ ಅನುಕೂಲಕ್ಕಾಗಿ ಪ್ರಸಕ್ತ ಮಂಡಿಸಲಿರುವ ಆಯವ್ಯಯದಲ್ಲಿ ರು.3062 ಕೋಟಿಯನ್ನು ನಿಗದಿಪಡಿಸಬೇಕು. ಈ ಅನುದಾನವನ್ನು ಗ್ರಾಮ ಸಭೆಗಳ ಬಲವರ್ಧನೆಗೆ, ವೈಯಕ್ತಿಕ ಹಾಗೂ ಸಾಮೂಹಿಕ ಅರಣ್ಯ ಭೂಮಿ ರಕ್ಷಣೆ ಮತ್ತು ಅಭಿವೃದ್ಧಿ, ಕೃಷಿ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಕಲಾ ಭವನ ನಿರ್ಮಿಸಬೇಕು.
ಗರ್ಭಿಣಿ ಹಾಗೂ ತಾಯಂದರಿಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಸೇವೆ, ಆಶ್ರಮ ಶಾಲೆಗಳ ಬಲವರ್ದನೆ, ಆದಿವಾಸಿ ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಬ್ಯಾಂಕ್ ರಚನೆ, ಆದಿವಾಸಿಗಳ ಆರೋಗ್ಯ ಸೇವೆಯ ಗಿಡಮೂಲಿಕೆ ಮತ್ತು ಔಷಧ ಪದ್ಧತಿಯ ಪ್ರೋತ್ಸಾಹ ಹಾಗೂ ಆದಿವಾಸಿಗಳ ಕುಟುಂಬಕ್ಕೆ ಜೀವ ವಿಮೆ ಒದಗಿಸುವುದಕ್ಕೆ ಈ ಅನುದಾನವನ್ನು ಮೀಸಲಿರಿಸಬೇಕು ಎಂದು ಆಗ್ರಹಿಸಲಾಗಿದೆ.
ಹಂತ ಹಂತವಾಗಿ ಬಿಡುಗಡೆ: ಈ ಎಲ್ಲ ಮನವಿಯನ್ನೂ ಶಾಂತಚಿತ್ತದಿಂದ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಯ್ದೆ ಅನುಷ್ಠಾನಕ್ಕೆ ಬರದಿರುವುದು ನನ್ನ ಗಮನಕ್ಕೆ ಬಂದಿದೆ. ಮನವಿಯಲ್ಲಿ ಕೇಳಲಾಗಿರುವ ಅನುದಾನ ಮೊತ್ತ ಹೆಚ್ಚಾಗಿಯೇ ಇದ್ದರೂ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ಆದಿವಾಸಿಗಳ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ ಎಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆನ್ನಲಾಗಿದೆ. ನಿಯೋಗದಲ್ಲಿ ಪ್ರೊ.ಗೋವಿಂದಯ್ಯ, ಎಸ್.ಶ್ರೀಕಾಂತ್, ಬಿ.ಶಿವರಾಜೇಗೌಡ, ಕೆಂಪರಾಜು, ವಿಠಲ್, ಪಿ.ಕೆ.ರಾಮು ಇದ್ದರು.