ಕಡವೆ ಕೊಂದು ಮಾಂಸ ಸಾಗಣೆ ಯತ್ನ ವಿಫಲ
ಆನೇಕಲ್: ಅಳಿವಿನ ಅಂಚಿನಲ್ಲಿರುವ ಕಡವೆ ಕೊಂದು ಮಾಂಸವನ್ನು ಬೇರ್ಪಡಿಸಿ ಸಾಗಿಸುವಾಗ ಅರಣ್ಯ ಸಿಬ್ಬಂದಿ ದಾಳಿಗೆ ಹೆದರಿ ಓಡಿಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಸಂಜೆ ಕಾಡಿಗೆ ನುಸುಳಿದ ಐವರು ದುಷ್ಕರ್ಮಿಗಳ ಕಣ್ಣಿಗೆ ಈ ಕಡೆವ ಕಂಡು ಬಂದಿದ್ದು ಇದನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ. ಅನಂತರ ಇದರ ದೇಹವನ್ನು ಕತ್ತರಿಸಿ ಎರಡು ಚೀಲಗಳಲ್ಲಿ ತುಂಬಿದ್ದಾರೆ. ಇನ್ನೇನು ಸಾಗಿಸಬೇಕು ಎನ್ನುವಾಗ ಎಚ್ಚೆತ್ತುಕೊಂಡು ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದಾಗ ಮಾಂಸವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ಅವರು ತೊಟ್ಟಿದ್ದ ಬಟ್ಟೆ, ಡೈರಿ, ವಿಸಿಟಿಂಗ್ ಕಾರ್ಡ್ ಮುಂತಾದವುಗಳು ದೊರೆತಿದ್ದು ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಬನ್ನೇರುಘಟ್ಟ ಪಿಎಸ್ಸೈ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿ ದೇವರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.