ತೆಂಗು ಬೆಳೆಗಾರರ ರಕ್ಷಣೆಗಾಗಿ ಹೋರಾಟ
ಕ.ಪ್ರ. ವಾರ್ತೆ, ಚನ್ನಪಟ್ಟಣ, ಜು.8-
ತೆಂಗು ಬೆಳೆಗಾರರ ರಕ್ಷಣೆಗಾಗಿ ಸದನದ ಹೊರಗೆ ಮತ್ತು ಒಳಗೆ ಹೋರಾಟ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಕಟಿಸಿದರು.
ರಾಜ್ಯಾದ್ಯಂತ ತೆಂಗಿನ ಮರಗಳು ಕಾರಣಾಂತರಗಳಿಂದ ಧರೆಗುರುಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೊಂಡಾಪುರ, ಕೋಡಂಬಹಳ್ಳಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಪಟ್ಟಣದ ಪ್ರವಾಸಿಮಂದಿರದಲ್ಲಿ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ ಮಾತನಾಡಿ, ತೆಂಗು ಬೆಳೆಗಾರರ ಬದುಕು ಸೂತ್ರ ಹರಿದ ಗಾಳಿ ಪಟದಂತಾಗಿದ್ದು ಅವರ ರಕ್ಷಣೆಗೆ ನಾವೆಲ್ಲ ನಿಲ್ಲಬೇಕಿದೆ ಎಂದರು.
ಹಲವಾರು ರೋಗ ರುಜಿನ, ಅಂತರ ಜಲದ ಕೊರತೆಯಿಂದಾಗಿ ತೆಂಗಿನ ಮರಗಳು ಧರೆಗುರುಳುವ ಮೂಲಕ ತೆಂಗು ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದ್ದು ರೈತರ ರಕ್ಷಣೆಗೆ ಸರ್ಕಾರಗಳು ಗಮನಹರಿಸದಿರುವುದು ವಿಷಾದನೀಯ ಎಂದರು.
ಕೇರಳ ಮಾದರಿ ಪರಿಹಾರ ನೀಡಿ: ನೆರೆಯ ಕೇರಳ ರಾಜ್ಯದಲ್ಲಿ ರೋಗ ಬಾಧೆ ಸೇರಿದಂತೆ ಯಾವುದೇ ಕಾರಣದಿಂದ ಮರಗಳು ನಾಶವಾದರೆ ತೆಂಗು ಬೆಳೆಗಾರರಿಗೆ ಪ್ರತಿ ಮರಕ್ಕೆ 13 ಸಾವಿರ ರೂ. ಸಹಾಯ ಧನ ನೀಡುತ್ತಿದ್ದು ನಮ್ಮ ರಾಜ್ಯದ ರೈತರಿಗೂ ಇಂತಹುದೇ ಪ್ಯಾಕೇಜ್ ದೊರೆಯಬೇಕಿದೆ ಎಂದು ಆಗ್ರಹಿಸಿದರು.
ಕೇರಳ ಸರ್ಕಾರದ ನೀತಿ ನಮ್ಮ ಸರ್ಕಾರಕ್ಕೂ ಮಾದರಿಯಾಗಬೇಕಿದ್ದು ಜಿಲ್ಲಾ ಮತ್ತು ತಾಲೂಕು ಆಡಳಿತಗಳಿಂದ ಸರ್ಕಾರ ಈಬಗ್ಗೆ ವರದಿ ತರಿಸಿ ಕೊಂಡು ತ್ವರಿತವಾಗಿ ತೆಂಗು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸ ಬೇಕಿದೆ ಎಂದರು.
ವಿಶೇಷ ಪ್ಯಾಕೇಜ್ ನೀಡಿ: ರಾಜ್ಯದ 9 ಜಿಲ್ಲೆಗಳಲ್ಲಿ ತೆಂಗು ಬೆಳೆಯುವ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು ತೆಂಗಿನ ಮರಗಳು ಧರೆಗುರುಳುತ್ತಿರುವುದರಿಂದ ಇವರಿಗೆ ಬದುಕಿನ ದಾರಿಯೇ ಇಲ್ಲದಂತಾಗಿದೆ, ತೆಂಗು ಬೆಳೆಗಾರರು ನೇಣುಹಾಕಿ ಕೊಳ್ಳುವ ದುಃಸ್ಥಿತಿ ಬಂದಿದ್ದು ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ನಲ್ಲಿ ತೆಂಗು ಬೆಳೆಗಾರರಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ದೇವೇಗೌಡ ಸಲಹೆ ಇತ್ತರು.
ಹಿಂದೆ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗ ತೆಂಗು ಬೆಳೆಗಾರರ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಕೇಂದ್ರಕ್ಕೆ ನಿಯೋಗ ಕರೆದು ಕೊಂಡು ಹೋಗಿದ್ದರು. ಈಗ ಅವರೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದು ಕೂಡಲೇ ತೆಂಗು ಬೆಳೆಗಾರರ ರಕ್ಷಣೆಗೆ ಮುಂದಾಗ ಬೇಕೆಂದು ಆಗ್ರಹಿಸಿದರು.
ಸರ್ಕಾರಗಳಿಗೆ ಒತ್ತಾಯ: ತೆಂಗು ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವಂತೆ ಕೆಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದಾಗಿ ದೇವೇಗೌಡ ತಿಳಿಸಿದರು. ಪ್ರಧಾನ ಮಂತ್ರಿ, ಕೇಂದ್ರ ಕೃಷಿ ಸಚಿವ, ಮುಖ್ಯಮಂತ್ರಿ, ಹಾಗೂ ತೋಟಗಾರಿಕೆ ಸಚಿವರನ್ನು ಭೇಟಿಯಾಗಿ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಧಾವಿಸುವಂತೆ ಒತ್ತಾಯಿಸುವುದಾಗಿ ಅವರು ತಿಳಿಸಿದರು.
ತೆಂಗು ಬೆಳೆಗಾರರ ಸಮಸ್ಯೆಯ ಬಗ್ಗೆ ಮುಂದಿನ ಲೋಕಸಭಾ ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದ ಅವರು ತೆಂಗು ಬೆಳೆಗಾರರ ರಕ್ಷಣೆಗಾಗಿ ಹೋರಾಟ ನಡೆಸಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ದುಂತೂರು ವಿಶ್ವಾನಾಥ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಕನಕಪುರ ನಾರಾಯಣಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ರಘುಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ಸತ್ಯನಾರಾಯಣ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ವಾಸೀಲ್ ಆಲಿಖಾನ್, ತಾ.ಪಂ ಸದಸ್ಯ ಭಾನುಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನಾ ತಾಲೂಕಿನ ಕೊಂಡಾಪುರ, ಕೋಡಂಬಹಳ್ಳಿ ಭಾಗದಲ್ಲಿ ತೆಂಗಿನ ಮರಗಳು ಅಂತರ ಜಲದ ಕೊರತೆಯಿಂದ ಸುಳಿ ಮುರಿದು ಕೊಂಡಿದ್ದ ದೃಶ್ಯವನ್ನು ಮಾಜಿ ಪ್ರಧಾನಿ ವೀಕ್ಷಿಸಿ ತೆಂಗಿನ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯ ಬೇಡಿ. ಈ ಬಗ್ಗೆ ಸರ್ಕಾರಗಳ ಗಮನಸೆಳೆದು ಪರಿಹಾರ ಕೊಡಿಸುವುದಾಗಿ ರೈತರಿಗೆ ಸ್ಥೈರ್ಯ ತುಂಬಿದರು.