ಬಳ್ಳೂರಿಗೆ ಓವರ್ ಹೆಡ್ಟ್ಯಾಂಕ್ ನೀಡಿ: ಪೂರ್ಣಿಮಾ ಒತ್ತಾಯ
ಆನೇಕಲ್ಲು: ಕೈಗಾರಿಕಾ ಪ್ರದೇಶದಿಂದ ಆವೃತ್ತವಾಗಿರುವ ಗಡಿ ಗ್ರಾಮ ಬಳ್ಳೂರಿಗೆ ಕನಿಷ್ಠ 2 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಮಂಜೂರು ಮಾಡಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮ ಮಧುಕುಮಾರ್ ಆನೇಕಲ್ ಶಾಸಕ ಬಿ.ಶಿವಣ್ಣ ಅವರನ್ನು ಒತ್ತಾಯಿಸಿದ್ದಾರೆ.
ಅವರು ಪರಿಸರ ದಿನಾಚರಣ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಸಿ ನೆಟ್ಟು ಮಾತನಾಡಿ ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದಾಜು 2 ಕೋಟಿ ರು.ಗಳ ಕಾಮಗಾರಿಗಳನ್ನು ಪೂರೈಸಲಾಗಿದೆ. ಕಾಂಕ್ರಿಟ್ ರಸ್ತೆ, ಆಸ್ಪತ್ರೆ ಕಟ್ಟಡ ನಿರ್ಮಾಣ, ಚರಂಡಿ ಹಾಗೂ ಬೀದಿ ದೀಪಗಳಿಗೆ ಆದ್ಯತೆ ನೀಡಿ ರಾಷ್ಟ್ರ ಮಟ್ಟದ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಪಾತ್ರವಾದ ಪಂಚಾಯ್ತಿಯಾಗಿದೆ ಎಂದರು.
ಹಾಲಿ ಬಳ್ಳೂರಿನಲ್ಲಿ 15 ಸಾವಿರ ಜನಸಾಂದ್ರತೆ ಇದ್ದು ಹಳೆಯ ಹಾಗೂ ಶಿಥಿಲವಾದ ಟ್ಯಾಂಕ್ ಬದಲು ದೊಡ್ಡ ಟ್ಯಾಂಕ್ ಅವಶ್ಯಕತೆಯಿದೆ ಎಂದರು.
ಅಧ್ಯಕ್ಷೆ ಮಂಜುಳಾ ವಿ. ರೆಡ್ಡಿ ಮಾತನಾಡಿ ಬಳ್ಳೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡವಿದ್ದು ಸಾಕಷ್ಟು ಸಿಬ್ಬಂದಿ ಇರುವುದಿಲ್ಲ. ಗಡಿ ಭಾಗದ 10 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಾಗಿದ್ದು ನುರಿತ ಸಿಬ್ಬಂದಿ ಇಲ್ಲದೇ ಮಹಿಳೆಯರು ಅತ್ತಿಬೆಲೆ ಅಥವಾ ತಮಿಳುನಾಡಿನ ಹೊಸೂರಿಗೆ ಹೋಗಬೇಕಿದೆ. ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕ ಶಿವಣ್ಣನವರು ಈ ಕೂಡಲೇ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಸದಸ್ಯರಾದ ಬಾಬೂರೆಡ್ಡಿ ಮತ್ತು ಮಂಜುನಾಥ್ ಮಾತನಾಡಿ ಗ್ರಾಮ ಸಭೆಯಲ್ಲಿ ಪಡಿತರ ವಿತರಣೆ ವ್ಯವಸ್ಥೆ ಹಾಗೂ ಚೀಟಿ ವಿತರಣೆಗಾಗಿ ಹೆಚ್ಚಿನ ಸಿಬ್ಬಂದಿ ನಿಯೋಗವಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಪಡಿತರ ಚೀಟಿ ಪಡೆಯಲು ಮನೆಯ ಹಕ್ಕುಪತ್ರ ಅಥವಾ ಬೆಸ್ಕಾಂ ರಸೀತಿ ಬೇಕಿದೆ. ಶೀಘ್ರ ಹಕ್ಕು ಪತ್ರ ವಿತರಣೆಯಾಗಬೇಕೆಂದರು.
ಲಾರಿ ಮಾಲಿಕರ ಸಂಘದ ಅಧ್ಯಕ್ಷ ಪ್ರಕಾಶ್ ರೆಡ್ಡಿ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿ ಒಳ ಚರಂಡಿ ವ್ಯವಸ್ಥೆಗೆ ಪ್ರಸ್ಥಾಪ ನೀಡಬೇಕೆಂಬ ಸಲಹೆ ನೀಡಿದರು. ವೇಣು, ಚಂದ್ರಶೇಖರ್, ಮಂಜುನಾಥ್, ವೆಂಕಟರೆಡ್ಡಿ, ಹರೀಶ್ ಇದ್ದರು.