ಬೊಂಬೆ ಬೀಡಿನಲ್ಲಿ ನೈರ್ಮಲ್ಯ ಮರೀಚಿಕೆ
ಚನ್ನಪಟ್ಟಣ: ಡೆಂಘೀ ಮಹಾಮಾರಿ ತಾಲೂಕಿನಲ್ಲಿ ಮರಣ ಮೃದಂಗ ಬಾರಿಸಲು ಸಂಚು ನಡೆಸುತ್ತಿದೆಯಾದರೂ ಇಲ್ಲಿನ ನಗರಸಭೆ ಮೈಚಳಿ ಬಿಟ್ಟು ಮೇಲೇಳದ ಪರಿಣಾಮ ಕೊಳೆತು ನಾರುತ್ತಿರುವ ಪಟ್ಟಣ ಸಾಂಕ್ರಾಮಿಕ ರೋಗಗಳಿಗೆ ರತ್ನಗಂಬಳಿ ಹಾಸಿದೆ.
ಬೊಂಬೆ ಬೀಡಿನಲ್ಲಿ ನೈರ್ಮಲ್ಯ ಎಂಬುದು ಮರೀಚಿಕೆಯಾಗಿದ್ದು, ಅಲ್ಲಲ್ಲಿ ಚೆಲ್ಲಾಡುತ್ತಿರುವ ಕಸದರಾಶಿ, ಕಟ್ಟಿನಿಂತಿರುವ ಚರಂಡಿ, ರಸ್ತೆಯಲ್ಲಿ ನಿರ್ಮಾಣ ಗೊಂಡಿರುವ ಗುಂಡಿಗಳು ಪಟ್ಟಣ ಕೊಳೆತು ನಾರುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.
ಲೆಕ್ಕಕ್ಕೆ ಮಾತ್ರ ಕೆಲಸ: ಡೆಂಘೀ ಪ್ರಕರಣ ತಾಲೂಕಿನಲ್ಲಿ ಹೆಚ್ಚಳ ಗೊಳ್ಳುತ್ತಿದ್ದಂತೆ ಆರಂಭದ ದಿನಗಳಲ್ಲಿ ಜೆಸಿಬಿ ತರಿಸಿ ಪಟ್ಟಣದ ಕೆಲ ಮೋರಿಗಳನ್ನು ಶುಚಿಗೊಳಿಸಿ ಅಲ್ಲಲ್ಲಿ ಕಸ ತುಂಬಿಸಿ ಶೋ ಅಪ್ ಮಾಡಿದ ನಗರಸಭೆ ಅಧಿಕಾರಿಗಳು ಅದಾದ ನಂತರ ಅಲ್ಲಿರುವ ಕಸದ ಗುಡ್ಡೆಯನ್ನು ತೆರವು ಗೊಳಿಸುತ್ತಿಲ್ಲ.
ಪಟ್ಟಣದ ದೊಡ್ಡ ಚರಂಡಿಯಂತಿರುವ ಕಣ್ವ ಚಾನಲ್ ಒಳಗಿನ ಮಣ್ಣನ್ನು ಜೆಸಿಬಿಯಿಂದ ಹೊರತೆಗೆದು ಚಾನಲ್ ಬದಿಯಲ್ಲಿ ಗುಡ್ಡೆಹಾಕಿ ಹೋಗಿದ್ದು ಇದರಿಂದಾಗಿ ಇಲ್ಲಿ ತಿರುಗಾಡುವುದೇ ದುಸ್ಥರವೆನಿಸಿದೆ.
ಸಂಬಂಧ ಇಲ್ಲದಂತೆ ವರ್ತನೆ: ಇತ್ತೀಚಿಗೆ ಸುರಿದ ಮಳೆಯಿಂದಾಗಿ ಈ ತ್ಯಾಜ್ಯಗಳು ಮಳೆಯ ನೀರಿನೊಂದಿಗೆ ರಸ್ತೆ ತುಂಬ ಹರಡಿ ಕೊಂಡಿದ್ದು ಈ ಭಾಗದ ನಿವಾಸಿಗಳು ನಗರಸಭೆ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರಾದರೂ ನಗರಸಭೆ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ಕಚೇರಿಯಲ್ಲಿ ಕುಳಿತಿದ್ದಾರೆ.
ರಾಜಾಕೆಂಪೇಗೌಡ ಬಡಾವಣೆಗೆ ಹೊಂದಿಕೊಂಡಂತೆ ಇರುವ ಕಣ್ವಚಾನಲ್ ತುಂಬ ಗಿಡಗಂಟೆಗಳು ಬೆಳೆದು ನಿಂತಿದ್ದು ನೀರು ಹರಿದು ಹೋಗದಂತಾಗಿದೆ. ಇದರಿಂದಾಗಿ ಚರಂಡಿ ನೀರು ಕಟ್ಟಿ ನಿಲ್ಲುತ್ತಿದ್ದು ಇಲ್ಲಿ ಸೊಳ್ಳೆ, ನೊಣ ಮೊದಲಾದ ಕ್ರಿಮಿ, ಕೀಟಗಳು ತುಂಬಿ ಕೊಂಡಿವೆ.
ಲೆಕ್ಕಕ್ಕೆ ಮಾತ್ರ ಕೆಲಸ: ನಗರಸಭೆ ಅಧಿಕಾರಿಗಳು ಕೆಲಸ ಮಾಡಿದ ಶಾಸ್ತ್ರ ಮುಗಿಸಿ ಬಿಲ್ ಪಾವತಿ ಮಾಡುವ ಕೆಲಸ ಮಾಡಿಕೊಳ್ಳುತ್ತಿದ್ದು ಒಂದೆರಡು ದಿನ ಜೆಸಿಬಿ ಕರೆಸಿ ಶೋ ಅಪ್ ಮಾಡಿದ ಅಧಿಕಾರಿಗಳು ನಂತರದ ದಿನಗಳಲ್ಲಿ ಇತ್ತ ತಲೆಹಾಕಿಲ್ಲ. ನೈರ್ಮಲ್ಯ ನಿರ್ವಹಣೆ ಹೆಸರಿನಲ್ಲಿ ಸಾಕಷ್ಟು ಬಿಲ್ ಮಾಡಿಕೊಂಡಿದ್ದಾರೆ ಎಂಬುದು ನಗರದ ನಿವಾಸಿಗಳ ಆರೋಪವಾಗಿದೆ.
ವಿಲೇವಾರಿಯಾಗುತ್ತಿಲ್ಲ ಕಸ: ಪಟ್ಟಣದ ಪ್ರತಿವಾರ್ಡ್ನಲ್ಲಿ ಸಂಗ್ರಹವಾಗುವ ಕಸವನ್ನು ಕಾಲಕಾಲಕ್ಕೆ ವಿಲೇವಾರಿ ಮಾಡ ಬೇಕಿದೆ ಯಾದರೂ ನಗರಸಭೆ ಸಿಬ್ಬಂದಿಯ ಉದಾಸೀನತೆಯಿಂದಾಗಿ ಈ ಕಸ ವಾರಗಟ್ಟಲೆ ಅಲ್ಲೇ ಕೊಳೆಯುತ್ತಿದ್ದು ಇದರಿಂದಾಗಿ ಅಲ್ಲಲ್ಲಿ ಕಸದ ಗುಡ್ಡೆಗಳು ಕಾಣುತ್ತಿವೆ.
ಪುರ ಪಿತೃಗಳು ಇನ್ನೂ ಅಧಿಕಾರ ಸ್ವೀಕರಿಸದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಅಧಿಕಾರಿಗಳು ನೈರ್ಮಲ್ಯದ ಬಗ್ಗೆ ಗಮನ ಹರಿಸದೆ ತಮ್ಮ ಪಾಡಿಗೆ ತಾವಿದ್ದು ಇದರಿಂದಾಗಿ ಬೊಂಬೆನಗರಿ ಕಸದಗುಂಡಿಯಾಗಿ ಮಾರ್ಪಟ್ಟಿದೆ.
ಡೆಂಘೀ ಸೇರಿದಂತೆ ಸಾಕಷ್ಟು ಸಾಂಕ್ರಾಮಿಕ ರೋಗಗಳು ಇತ್ತೀಚಿನ ದಿನಗಳಲ್ಲಿ ಹರಡುತ್ತಿದ್ದು, ಇತ್ತ ನಗರಸಭೆ ನೈರ್ಮಲ್ಯ ನಿರ್ವಹಣೆ ತನ್ನ ಕೆಲಸವೇ ಅಲ್ಲ ಎಂಬಂತೆ ನಿದ್ರ ಹೊಡೆಯುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡುವಂತೆ ಮಾಡಿದೆ. ಇನ್ನಾದರೂ ಸಂಬಂಧಿಸಿದ ಮಂದಿ ಇತ್ತ ಗಮನ ಹರಿಸಿಯಾರೇ ನೋಡಬೇಕಿದೆ.