ಸಿಲಿಂಡರ್ ಸ್ಫೋಟ: ಬೇಕರಿ ಭಸ್ಮ
ಆನೇಕಲ್: ಸಿಲಿಂಡರ್ ಸೋರಿಕೆಯಿಂದಾಗಿ ಬೇಕರಿಯೊಂದು ಭಸ್ಮವಾಗಿರುವ ಘಟನೆ ಬಿಳೇಕಳ್ಳಿ ಠಾಣಾ ವ್ಯಾಪ್ತಿಯ ಸಾರ್ವಭೌಮನಗರದಲ್ಲಿ ಸೋಮವಾರ ಸಂಜೆ ನಡೆದಿದೆ.
ಜೆನ್ ಬೇಕರಿ ಮಾಲೀಕ ಖಾಲಿದ್ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಿ ಸಂಜೆ ಬಂದಾಗ ಅಂಗಡಿಯಿಂದ ಹೊಗೆ ಬರುತ್ತಿತ್ತು. ಬಾಗಿಲು ತೆಗೆದ ತಕ್ಷಣ ಬೆಂಕಿ ತನ್ನ ಕೆನ್ನಾಲಿಗೆಯನ್ನು ಹೊರಗೆ ಚಾಚಿತು. ಕಿರುಚಿಕೊಂಡ ಬೀದಿಗೆ ಬಿದ್ದ ಆತನನ್ನು ನೆರೆ ಅಂಗಡಿಯವರು ಸಂತೈಸಿ ಅಗ್ನಿ ಶಾಮಕ ದಳ ಹಾಗೂ ಸ್ಥಳೀಯ ಠಾಣೆಗೆ ದೂರವಾಣಿ ಕರೆ ಮಾಡಿದರು.
ಅಗ್ನಿ ಶಾಮಕ ದಳ ಸ್ಥಳಕ್ಕೆ ಬರುವ ವೇಳೆಗೆ ನೆರೆಹೊರೆಯವರು ನೀರು ಹಾಯಿಸಿ ಬೆಂಕಿ ಪಕ್ಕದ ಅಂಗಡಿಗೆ ಚಾಚುವುದನ್ನು ತಡೆದರು. ಆಗ್ನಿ ಶಾಮಕ ದಳ ಸ್ಥಳಕ್ಕೆ ಬಂದು ಪ್ರಯಾಸದಿಂದ ಬೆಂಕಿಯನ್ನು ನಂದಿಸಿದರು. ಅಂಗಡಿಯಲ್ಲಿ ಮೂರು ಅನಿಲ ಸಿಲಿಂಡರ್ಗಳಿದ್ದು ಅಂದಾಜು ರು. 4ಲಕ್ಷ ನಷ್ಟವಾಗಿದೆ ಎಂದು ಖಾದಿರ್ ದೂರಿನಲ್ಲಿ ತಿಳಿಸಿದ್ದಾರೆ.