ಸುದ್ದಿ ಸಂಕ್ಷೇಪ
ಉತ್ತರ ಭಾರತ ಪ್ರವಾಹ ಸಂತ್ರಸ್ತರಿಗೆ ನಿಧಿ ಸಂಗ್ರಹ
ದೊಡ್ಡಬಳ್ಳಾಪುರ: ಉತ್ತರಭಾರತದಲ್ಲಿ ಪ್ರವಾಹದಿಂದ ತತ್ತರಿಸಿ ಸಂತ್ರಸ್ತರಾಗಿರುವ ಲಕ್ಷಾಂತರ ಜನರಿಗೆ ಪರಿಹಾರ ಒದಗಿಸಲು ನೆರವಾಗುವ ನಿಟ್ಟಿನಲ್ಲಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಪಾದಯಾತ್ರೆ ನಡೆಸಿ ನಿಧಿ ಸಂಗ್ರಹ ಮಾಡಲಾಯಿತು. ಶಾಸಕ ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿಗಳು, ಮನೆಗಳಿಗೆ ತೆರಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಉತ್ತರ ಭಾರತ ಹಿಂದೆಂದೂ ಕಂಡು ಕೇಳರಿಯದ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಪರಿಣಾಮವಾಗಿ ಲಕ್ಷಾಂತರ ಜನ ಸಂತ್ರಸ್ತರಾಗಿದ್ದಾರೆ. ಮಾನವೀಯ ದೃಷ್ಟಿಯಿಂದ ನಾವೆಲ್ಲರೂ ಇದು ನಮ್ಮೆಲ್ಲರ ಸಂಕಷ್ಟ ಎಂದೇ ಪರಿಭಾವಿಸಬೇಕು. ಭಾರತೀಯರೆಲ್ಲರೂ ಭಾರತೀಯ ನಾಗರೀಕರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ಹಂತದಲ್ಲಿ ಸರ್ಕಾರದೊಟ್ಟಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಈ ಹಂತದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ನೇತೃತ್ವದಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಿಸುತ್ತಿದೆ. ಇದಕ್ಕೆ ಎಲ್ಲ ಸಾರ್ವಜನಿಕರ ಸಹಕಾರ ಮುಖ್ಯ ಎಂದರು. ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಕನ್ನಡ ಕಾವ್ಯ
ಸಂಸ್ಕೃತಿ ಕಮ್ಮಟ
ಬೆಂಗಳೂರು: ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆ.9ರಿಂದ 3ದಿನಗಳ ಕಾಲ ನಗರದ ಮಲ್ಲತ್ತಹಳ್ಳಿಯಲ್ಲಿರುವ ಕನ್ಯಾಕುಮಾರಿ ವಿದ್ಯಾಸಂಸ್ಥೆಯಲ್ಲಿ ರಾಜ್ಯಮಟ್ಟದ 6ನೇ ಕನ್ನಡ ಕಾವ್ಯ ಸಂಸ್ಕೃತಿ ಕಮ್ಮಟ ಏರ್ಪಡಿಸಿದೆ. 14ರಿಂದ 30ವರ್ಷದ ಕನ್ನಡ ಕಾವ್ಯಾಸಕ್ತ ಯುವಕರು ಮತ್ತು ವಿದ್ಯಾರ್ಥಿಗಳಿಗಾಗಿ ಕಮ್ಮಟ ಏರ್ಪಡಿಸಲಾಗಿದ್ದು, ಈ ಕಮ್ಮಟದಲ್ಲಿ ಹಿರಿಯ ಸಾಹಿತಿಗಳು, ಕಲಾವಿದರು, ಸಂಸ್ಕೃತಿ ಚಿಂತಕರಿಂದ ಹಳಗನ್ನಡ, ಹೊಸಗನ್ನಡ ಕಾವ್ಯದ ಓದು, ಬರಹ, ಗ್ರಹಿಕೆ, ವಿಷಯ ವಿಚಾರಗಳನ್ನು ತಿಳಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ- 9448880985, 9448573062.
ಹರಿಭಕ್ತಿ ಸಾರ ಕೃತಿ ಕುರಿತ ಕಮ್ಮಟ
ಕನಕಪುರ: ಕರ್ನಾಟಕ ಗಮಕಕಲಾ ಪರಿಷತ್ತು ರಾಮನಗರ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 7 ಮತ್ತು 8 ರಂದು ಹರಿದಾಸ ಸಾಹಿತ್ಯದ ಮೇರುಕೃತಿ ಕನಕದಾಸರ ಹರಿಭಕ್ತಿ ಸಾರ ಕೃತಿ ಕುರಿತ ವಿಚಾರ ಕಮ್ಮಟ ಕನಕಪುರದಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು,ಗಾಯಕರು ಕಮ್ಮಟದಲ್ಲಿ ಪಾಲ್ಗೊಳ್ಳಲು ಜುಲೈ 25 ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಕೋರಿದ್ದಾರೆ. ವಿಚಾರ ಕಮ್ಮಟದ ನೇತೃತ್ವವನ್ನು ಗಮಕಿಗಳು ಹಾಗೂ ವಿದ್ವಾಂಸರಾದ ತೆಕ್ಕೇಕಟ್ಟೆ ಸುಬ್ರಹ್ಮಣ್ಯ ಭಟ್, ಸರಸ್ವತೀ ಭಟ್ ನೀಡಲಿದ್ದಾರೆ. ಮೊ.9986450642 ಸಂಪರ್ಕಿಸಲು ಕೋರಿದೆ.