ಸ್ಮಶಾನ ಜಾಗ ಮರು ಅಳತೆಗೆ ಒತ್ತಾಯ
ಹೊಸಕೋಟೆ: ಪಟ್ಟಣದ ಮಾಲೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯ ಬಹಳಷ್ಟು ಪ್ರದೇಶ ಒತ್ತುವರಿಯಾಗಿದ್ದು, ಕಂದಾಯ ಇಲಾಖೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿ ಮರು ಅಳತೆ ಮಾಡಿ ಜಾಗವನ್ನು ಅತಿಕ್ರಮಣದಿಂದ ತಡೆಗಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುತ್ತಮುತ್ತಲಿನ ಜಾಗವನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿರುವ ಕಾರಣ ಸ್ಮಶಾನ ದುಃಸ್ಥಿತಿಯಲ್ಲಿರುವುದಷ್ಟೇ ಅಲ್ಲದೆ ಶವಸಂಸ್ಕಾರ ನೆರವೇರಿಸಲು ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಪ್ರದೇಶವು ದಂಡುಪಾಳ್ಯ ಗ್ರಾಮಕ್ಕೆ ಸೇರಿದ್ದು, ಅಗಸನ ಕೆರೆಯ ಅಂಗಳದ ಪಕ್ಕದಲ್ಲಿರುವ ರುದ್ರಭೂಮಿಯು ನೂರಾರು ವರ್ಷಗಳಿಂದ ಹಳೆಯ ಪಟ್ಟಣದ ಮೂಲ ನಿವಾಸಿಗಳಾದ ನಾಯಕರು, ತಿಗಳರು, ಕೊರಚರು, ಲಿಂಗಾಯತರು, ಗಾಣಿಗರು ಶವಸಂಸ್ಕಾರಕ್ಕೆ ಬಳಸುತ್ತಿದ್ದಾರೆ. ಸುಮಾರು 40 ವರ್ಷಗಳಿಂದಲೂ ಈ ಪ್ರದೇಶ ಎಲ್ಲಾ ಭಾಗಗಳಿಂದಲೂ ಒತ್ತುವರಿಯಾಗುತ್ತಿದ್ದು, ಈ ಬಗ್ಗೆ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿಸ್ತಾರವಾದ ಸ್ಮಶಾನವಿದ್ದರೂ ಒತ್ತುವರಿಯಾಗಿರುವ ಕಾರಣದಿಂದಾಗಿ ಒಂದರ ಮೇಲೆ ಮತ್ತೊಂದು ಹೆಣವನ್ನು ಹಾಕಬೇಕಾದ್ದು ಅನಿವಾರ್ಯವಾಗಿದ್ದು, ಸಾಂಪ್ರದಾಯಿಕವಾಗಿ ಪೂಜೆ ಮತ್ತು ಸಂಸ್ಕಾರ ಕ್ರಿಯೆ ನೆರವೇರಿಸಲು ಸಾಧ್ಯವಾಗುತ್ತಿಲ್ಲ. 2009 ರಲ್ಲಿ ತಹಸೀಲ್ದಾರ್ ಅವರಿಗೆ ಸ್ಥಳದ ನಕಾಶೆ ನೀಡಲು ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನ ದೊರೆತಿಲ್ಲ. ಮನವಿ ನೀಡಿದಾಗ ಮಾತ್ರ ಸ್ಥಳ ತನಿಖೆ ನಡೆಸುವ ಕಣ್ಣೊರೆಸುವ ತಂತ್ರವನ್ನು ಅಧಿಕಾರಿಗಳು ಮಾಡುವುದಕ್ಕೆ ಮಾತ್ರ ಸೀಮಿತಗೊಂಡಿದ್ದಾರೆ. ಇಷ್ಟೇ ಸಾಲದೆಂಬಂತೆ ಪೊಲೀಸರು ಸಹ ಶವಗಳನ್ನು ಇಲ್ಲಿ ತಂದು ಹಾಕುತ್ತಿದ್ದು ದುರ್ವಾಸನೆಯಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಒಂದು ವರ್ಷದ ಹಿಂದೆ ಮಾಡಿದ್ದ ಮನವಿಯ ಮೇರೆಗೆ ಸ್ಥಳವನ್ನು ಅಳತೆ ಮಾಡುವ ಕಾರ್ಯ ಕೈಗೊಳಲಾಗಿತ್ತಾದರೂ ಪ್ರಭಾವಗಳಿಗೆ ಮಣಿದಿರುವ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂಬುದು ಸಾರ್ವಜನಿಕರ ದೂರಾಗಿದೆ.
ಪ್ರಭಾವಶಾಲಿಗಳಿಂದ ಅತಿಕ್ರಮಣ: ಕೆಲವು ಪ್ರಭಾವಶಾಲಿ ವ್ಯಕ್ತಿಗಳು ಸ್ಮಶಾನದ ಮುಂದಿನ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದು ಮುಂದೆ ಸ್ಮಶಾನ ಪ್ರವೇಶಿಸಲು ಸಹ ಹರಸಾಹಸ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಬಹುದು. ಪುರಸಭೆಗೆ ಸ್ಮಶಾನ ಅಭಿವೃದ್ಧಿಗಾಗಿ ಹಣ ಮಂಜೂರಾಗಿದ್ದರೂ ಕಾಟಾಚಾರಕ್ಕೆ ಎಂಬಂತೆ ಕಾಮಗಾರಿ ನಡೆಸಲಾಗಿದೆ.
ಸ್ಮಶಾನದಲ್ಲಿದ್ದ ದೊಡ್ಡದಾದ ಹಳ್ಳವನ್ನು ಎಲ್ಲಾ ಪೇಟೆಯವರು ಸೇರಿ ಮಣ್ಣು ತುಂಬಿಸಿ ಸಮತಟ್ಟುಗೊಳಿಸಿದ್ದಾರೆ. ಈಗಲಾದರೂ ಅಧಿಕಾರಿಗಳು ಸ್ಮಶಾನ ಸ್ಥಳವನ್ನು ಒತ್ತುವರಿಯಿಂದ ತೆರವುಗೊಳಿಸಿ ಇಲಾಖೆಯಲ್ಲಿರುವ ಮೂಲ ದಾಖಲೆಗಳ ಪ್ರಕಾರ ಮರು ಅಳತೆ ಮಾಡಿಸಬೇಕು. ಹಾಗೂ ಸ್ಮಶಾನದ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಜಾಗವನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಜನತೆ ಒತ್ತಾಯಿಸುತ್ತಿದ್ದಾರೆ.