ಕಂಪನ ಮೂಡಿಸಿದ ಒಂಟಿ ಸಲಗ
ಕ.ಪ್ರ. ವಾರ್ತೆ, ಆನೇಕಲ್ಲು, ಜು.9-
ಇತ್ತೀಚೆಗಷ್ಟೆ ಹೊಸೂರು ಕಾಡಿನಿಂದ ಹೊರಬಂದ ಆನೆಗಳ ಹಿಂಡು ಮಾಲೂರು, ಚಿಕ್ಕ ತಿರುಪತಿ, ಆನೇಕಲ್ ತಾಲೂಕಿನ ದೊಮ್ಮಸಂದ್ರ ಹಾಗೂ ಹುಸ್ಕೂರಿನಲ್ಲಿ ಸಂಚರಿಸಿ ಕಾಡು ಸೇರಿದ ಘಟನೆ ಮಾಸುವ ಮುನ್ನವೇ ಹೊಸೂರು ಕಾಡಿನಿಂದ ಹೊರಬಂದ ಒಂಟಿ ಸಲಗವೊಂದು ಹೊರವಲಯದ ಗ್ರಾಮಗಳಾದ ದೊಡ್ಡ ಮುತ್ತಳ್ಳಿ ಹಾಗೂ ವೆಂಕಟೇಶ್ವರ ಗ್ರಾಮಗಳಿಗೆ ಲಗ್ಗೆ ಇಟ್ಟು ಬೆಳೆ ತಿಂದು, ತುಳಿದು ಹಾನಿ ಮಾಡಿದೆ.
ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದೊಡ್ಡ ಮುತ್ತಾಳಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಸಲಗ ಜೋಳದ ತೋಟದಲ್ಲಿ ಬೆಳೆಯನ್ನು ತಿಂದು ಬಾಳೆ ಮತ್ತು ತೆಂಗನ್ನು ನಾಶಪಡಿಸಿತು. ಅಲ್ಲಿ ಸುತ್ತ ಮುತ್ತಲಿಗೆ ಕೈ ತೋಟದ ಬೆಳೆ ಆನೆ ತುಳಿದತದಿಂದ ಹಾಳಾಯಿತು. ಆನೆ ಊರಿನ ಸಮೀಪ ಬಂದ ವಿಷಯ ತಿಳಿದ ನೂರಾರು ಗ್ರಾಮಸ್ಥರು ಆನೆಯನ್ನು ಸುತ್ತುವರಿದ ಕಾಡಿಗೆ ಅಟ್ಟಲು ಪ್ರಯತ್ನಿಸಿದರು. ಜನರನ್ನು ನೋಡಿ ಗಾಬರಿಕೊಂಡ ಆನೆ ಜನರನ್ನು ಅಟ್ಟಿಸಿಕೊಂಡು ಬರತೊಡಗಿತು. ಅಷ್ಟರಲ್ಲಿ ಆಲ್ಲಿಗೆ ಬಂದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಜನರನ್ನು ನಿಯಂತ್ರಿಸಿ ಆನೆಯನ್ನು ಕಾಡಿಗೆ ಅಟ್ಟಲು ಪ್ರಯತ್ನ ಮಾಡಿದರು. ಕಾಡಿನ ದಾರಿ ಬಿಟ್ಟ ಸಲಗ ಪಕ್ಕದ ವೆಂಕಟೇಶ್ವರ ಹಳ್ಳಿಯ ಕಡೆ ನಡೆಯಿತು. ಈ ನಡುವೆ ನೆರೆ ಹಳ್ಳಿಗಳ ಗ್ರಾಮಸ್ಥರು ಕಾಡಾನೆಯನ್ನು ನೋಡಲು ಸಹಸ್ರ ಸಂಖ್ಯೆಯಲ್ಲಿ ಜಮಾಯಿಸಿದರು.
ದಿಕ್ಕು ತಪ್ಪಿದ ಆನೆ ಮಧ್ಯಾಹ್ನದ ವೇಳೆಗೆ ಸಮೀಪದ ನೀಲಗಿರಿ ತೋಪಿನಲ್ಲಿ ಆಶ್ರಯ ಪಡೆಯಿತು. ಮಧ್ಯಾಹ್ನದ ವೇಳೆಗೆ ಮಳೆಯ ಹನಿಯೂ ಸ್ವಲ್ಪ ಹೆಚ್ಚಾಯಿತು. ಜನರು ಆನೆಯನ್ನು ನೋಡಲು ತೋಪಿನ ಬಳಿ ಬಂದರು. ಕೆರಳಿದ ಆನೆ ಜನರನ್ನು ಅಟ್ಟಿಸಿಕೊಂಡು ಬಂದಾಗ ಕೆಲ ಜನರು ಓಡಿ ತಪ್ಪಿಸಿಕೊಂಡರೇ ಸಂಜೆ 4 ಗಂಟೆ ಸುಮಾರಿನಲ್ಲಿ ಮುತ್ತಾಳಿ ವಾಸಿ ತಿಮ್ಮನಾರಾಯಣಪ್ಪ(40) ಓಡುವ ಆತುರದಲ್ಲಿ ಜಾರಿ ಬಿದ್ದ. ಆಗ ಆನೆ ನಾರಾಯಣಪ್ಪನನ್ನು ತುಳಿದು ಓಡಿ ಮತ್ತೆ ತೋಪಿನಲ್ಲಿ ಸೇರಿಕೊಂಡಿತು.
ಕೂಡಲೇ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ನಾರಾಯಣಪ್ಪನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಸಂಜೆ 6 ಗಂಟೆ ನಂತರ ಜನ ಸಂದಣಿ ಸ್ವಲ್ಪಕಡಿಮೆಯಾಗತೊಡಗಿತು. ಅರಣ್ಯ ಸಿಬ್ಬಂದಿ ಹೊಸೂರಿನಿಂದ 20 ಕಿ.ಮೀ. ದೂರದ ಜವಳಗಿರಿ ಕಾಡಿಗೆ ಅಟ್ಟುವುದಾಗಿ ತಿಳಿಸಿದರು. 10ಲಕ್ಷ ರು. ಅಂದಾಜು ಬೆಲೆಯ ಬೆಳೆಯನ್ನು ಹಾಳು ಮಾಡಿ ಕಾಡು ಸೇರಿತು.