ಪರಿಸರ ಸಂರಕ್ಷಣೆ ಬಗ್ಗೆ ಜನಾಂದೋಲನ ಅಗತ್ಯ
ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಜು.9
ಮುಂದಿನ ಪೀಳಿಗೆಗೆ ಪರಿಸರ ಉಳಿಯಬೇಕಾದರೆ ನಾವು ಇಂದಿನಿಂದಲೇ ಪರಿಸರ ಸಂರಕ್ಷಣೆಯ ಬಗ್ಗೆ ವ್ಯಾಪಕ ಜನಾಂದೋಲನ ನಡೆಸಿ ಪರಿಸರದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಪವಿತ್ರ ಭೂಮಿ ಸಂಘದ ಅಧ್ಯಕ್ಷ ಕನ್ನಡ ಕುಮಾರ್ ಅಭಿಪ್ರಯಪಟ್ಟಿದ್ದಾರೆ.
ಅವರು ಮಾಗಡಿ ತಾಲೂಕಿನ ಪರಂಗಿ ಚಿಕ್ಕನಪಾಳ್ಯದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ ಭಾರತ ಸರ್ಕಾರ, ರಾಜ್ಯ ವಿಜ್ಞಾನ ಪರಿಷತ್, ಮಾಡಬಾಳ್ ಚೈತನ್ಯ ಪುರೋಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜೀವ ವೈವಿದ್ಯ ಸಂರಕ್ಷಣೆ ಮತ್ತು ರಾಷ್ಟ್ರೀಯ ಪರಿಸರ ಜಾಗೃತಿ ಅಂದೋಲನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಮನುಷ್ಯನ ದುರಾಸೆಯಿಂದ ಇಂದು ಬಹುತೇಕ ಅರಣ್ಯ ನಾಶವಾಗಿದೆ.
ಪರಿಸರ ಸಂರಕ್ಷಣೆ ಮಾಡದ ಹೊರತು ನಾವು ಸುಖಕರ ಜೀವನ ಮಾಡಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ಬಹುಮುಖ್ಯವಾಗಿದೆ. ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿಯ ಗುಣಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಿ ಅರಣ್ಯ ಉಳಿಸಿ-ಬೆಳೆಸಿ ಎಂಬ ಘೋಷಣೆಗಳು ವ್ಯಾಪಕವಾಗಿ ಕೇಳಿ ಬರಬೇಕು ಎಂದರು.
ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಶರಥ ಕಾರ್ಯಕ್ರಮವನ್ನು ಸಸಿಗಳಿಗೆ ನೀರು ಸಂಪಡಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಪಟ್ಟಣ ಮತ್ತು ಗ್ರಾಮೀಣ ವಿವಿಧ ಶಾಲಾ ಮಕ್ಕಳು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಜನಜಾಗೃತಿಗೊಳಿಸಬೇಕು. ಪಂಚಾಯ್ತಿಯೂ ಸಹ ಪರಿಸರ ರಕ್ಷಣೆಗೆ ವಿಶೇಷ ಒತ್ತು ನೀಡಲಿದೆ ಎಂದು ಹೇಳಿದರು.
ಜಿಲ್ಲಾ ಅಲರ್ಟ್ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಮಹಮದ್ ಆಲಿ ಜೀವ ವೈವಿದ್ಯ ಸಂರಕ್ಷಣೆಯ ಕುರಿತು ಮಾತನಾಡಿದರು. ಗ್ರಾ.ಪಂ. ಸದಸ್ಯ ಶಾಂತರಾಜು, ಚೈತನ್ಯ ಪುರೋಭಿವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣ, ಜೀವಿಕ ಸಂಚಾಲಕ ಗಂಗಹನುಮಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವರಾಮಯ್ಯ, ಸ್ತ್ರೀಶಕ್ತಿ ಸಂಘದ ಸದಸ್ಯರಾದ ಮಂಜಮ್ಮ, ಜಯಮ್ಮ, ನೇತೇನಹಳ್ಳಿ ಪಂಚಾಯ್ತಿ ಸಿ.ಆರ್.ಪಿ.ತಿಮ್ಮೇಗೌಡ, ಪಿ.ಸಿಪಾಳ್ಯದ ಮುಖಂಡ ಶಿವಣ್ಣ, ಸಂಪನ್ಮಾಲ ಶಿಕ್ಷಕ ಲಕ್ಷ್ಮೀನರಸಿಂಹಯ್ಯ, ಶಾಲೆಯ ಮುಖ್ಯಶಿಕ್ಷಕ ಗೋಪಾಲ್, ಅಸ್ಲಂಪಾಷ, ಚಿಕ್ಕನರಸಿಂಹಯ್ಯ ಇತರರು ಇದ್ದರು.