ಕೃಷಿ ಉಪಕರಣಗಳು ಕಡಿಮೆ ಬೆಲೆಗೆ ಸಿಗುವಂತಾಗಲಿ
ನೆಲಮಂಗಲ: ಗ್ರಾಮೀಣ ಭಾಗದ ರೈತರಿಗೆ ಸಹಾಯವಾಗುವಂತಹ ಕೃಷಿ ಉಪಕರಣಗಳು ಕಡಿಮೆ ಬೆಲೆಗೆ ಸಿಗುವಂತಾಗಬೇಕು ಎಂದು ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ಅವರು ಬುಧವಾರ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಪ್ರದರ್ಶಕರು 54ನೇ ವರ್ಷದ ವಸ್ತು ಪ್ರದರ್ಶನದಲ್ಲಿ ಮಾತನಾಡುತ್ತಾ ಆಧುನಿಕ ಯುಗದಲ್ಲಿ ಕೃಷಿ, ತೋಟಗಾರಿಕೆ ಬಗ್ಗೆ ಯುವಕರು ಆಸಕ್ತಿ ತೋರಿ ಕಾರ್ಯನಿರ್ವಹಿಸಿದಾಗ ಮಾತ್ರ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಲು ಸಾಧ್ಯ ಎಂದರು.
ಕೆನರಾ ಬ್ಯಾಂಕ್ ಬೆಂಗಳೂರು ಗ್ರಾಮಾಂತರ ವೃತ್ತ ಕಚೇರಿ ಹಾಗೂ ನೆಲಮಂಗಲ ಶಾಖೆ ಇವರ ಸಹಯೋಗದೊಂದಿಗೆ ವಸ್ತುಗಳು, ವಾಹನಗಳು ಮತ್ತು ಪುಸ್ತಕಗಳ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಕೃಷಿ, ತೋಟಗಾರಿಕೆ ಇಲಾಖೆಯಿಂದ ತಾಂತ್ರಿಕ ಮಾಹಿತಿ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಪುಸ್ತಕ ಮೇಳ, ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ವಸ್ತು ಪ್ರದರ್ಶನದ ವಿಶೇಷ ಆಕರ್ಷಣೆಯಾಗಿತ್ತು.
ವಸ್ತು ಪ್ರದರ್ಶನವನ್ನು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉದ್ಘಾಟಿಸಿ ಮಾತನಾಡಿ, ತಾಲೂಕಿನ ರೈತರಿಗೆ ಕೃಷಿ ಸಂಬಂಧಿತ ಉಪಕರಣ ವಸ್ತುಗಳ ಬಗ್ಗೆ ಮಾಹಿತಿಯನ್ನು ವಸ್ತು ಪ್ರದರ್ಶನದ ಮೂಲಕ ಅರಿವು ಮೂಡುತ್ತದೆ. ಇಂತಹ ಪ್ರದರ್ಶನಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದರು.
ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಪ್ರದರ್ಶಕ ಸುರೇಶ್ ಎ.ಎಂ. ಇದ್ದರು.