ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಬೆಂಗಳೂರು: ಬಾಲಯೊಬ್ಬಳ ಮೇಲೆ ಐದು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ವಿದ್ಯಾಪೀಠ ಸಮೀಪದ ಶ್ರೀರಾಮ ಬಡಾವಣೆ ನಿವಾಸಿ ನಾಗೇಂದ್ರ (24) ಬಂಧಿತ. ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಆಕೆಯನ್ನು ವಾಣಿವಿಲಾಸ ಹಾಗೂ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಶ್ರೀರಾಮ ಬಡಾವಣೆಯ ನಿವಾಸಿಯೇ ಆದ ಗೀತಾ ಎಂಬುವವರ ಪುತ್ರಿ 9ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾದ ಬಾಲಕಿ.
ಏನಿದು ಘಟನೆ: ಬಿಬಿಎಂಪಿ ನೌಕರ ನಾಗೇಂದ್ರ ಕಸ ಸಾಗಿಸುವ ಲಾರಿಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಈ ನಡುವೆ ಬಿಬಿಎಂಪಿಯಲ್ಲೇ ಕೆಲಸ ಮಾಡುತ್ತಿದ್ದ ಹಾಗೂ ಶ್ರೀರಾಮ ಬಡಾವಣೆ ನಿವಾಸಿಯೇ ಆದ ಗೀತಾ ಎಂಬಾಕೆ ಜತೆ ನಾಗೇಂದ್ರನ ಪರಿಚಯವಾಗಿತ್ತು. ಇಬ್ಬರ ನಡುವೆ ಸಂಬಂಧವಿತ್ತು. ಹಾಗಾಗಿ, ಆಗಾಗ ಗೀತಾ ಅವರ ಮನೆಗೆ ಬರುತ್ತಿದ್ದ ನಾಗೇಂದ್ರ ಆಕೆಯ ಪುತ್ರಿ ಮೇಲೆಯೂ ಅತ್ಯಾಚಾರವೆಸಗಿದ್ದಾನೆ.
ತಿಂಗಳ ಹಿಂದೆ ಬೆಳಕಿಗೆ: ಅತ್ಯಾಚಾರಕ್ಕೊಳಗಾದ ಬಾಲಕಿ ತಾನು ಗರ್ಭಿಣಿಯಾಗಿದ್ದೇನೆ ಎಂಬುದನ್ನು ಎರಡು ತಿಂಗಳ ಹಿಂದೆಯೇ ತಿಳಿದಿದೆ.ಈ ಸಂಬಂಧ ನಾಗೇಂದ್ರನಿಗೂ ವಿಷಯ ತಿಳಿಸಿದ್ದಾಳೆ. ಈ ವಿಷಯವನ್ನು ತಿಳಿದ ನಾಗೇಂದ್ರ, ವಿಷಯವನ್ನು ಯಾರಿಗೂ ತಿಳಿಸದಂತಹಾಗೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಈ ನಿಟ್ಟಿನಲ್ಲಿ ಬಾಲಕಿ ಯಾರ ಬಳಿಯೂ ವಿಷಯ ಹೇಳಿರಲಿಲ್ಲ. ಒಂದು ವಾರದ ಹಿಂದೆ ಬಾಲಕಿ ತಲೆಸುತ್ತು ಬಂದು ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ಬಾಲಕಿ ಅಮ್ಮ ಗೀತಾ ಹತ್ತಿರದ ವೈದ್ಯರೊಬ್ಬರ ಬಳಿ ತಪಾಸಣೆ ನಡೆಸಿದಾಗ, ಆಕೆ 5 ತಿಂಗಳ ಗರ್ಭಿಣಿ ಎಂಬುದು ತಿಳಿದು ಬಂದಿದೆ.
ಆರೋಪಿ ಪರಾರಿ: ಸುದ್ದಿ ತಿಳಿದ ಆರೋಪಿ ನಾಗೇಂದ್ರ ಬಾಲಕಿಗೆ ಗರ್ಭಪಾತ ಮಾಡಿಸುವಂತೆ ಸೂಚಿಸಿದ. ಅದಕ್ಕೆ ಒಪ್ಪಿದ ಗೀತಾ ಹಣ ಕೇಳಿದ್ದಾರೆ. ಆದರೆ, ನಾಗೇಂದ್ರ ಹಣ ನೀಡಲು ನಿರಾಕರಿಸಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಹಣ ನೀಡದಿದ್ದಲ್ಲಿ ಠಾಣೆಗೆ ದೂರು ನೀಡುವುದಾಗಿ ಗೀತಾ ತಿಳಿಸಿದ್ದಾರೆ. ಇದರಿಂದ ಹೆದರಿದ ನಾಗೇಂದ್ರ ಮನೆಬಿಟ್ಟು ಪರಾರಿಯಾಗಿದ್ದಾನೆ. ಗೀತಾ ಸೋಮವಾರ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಸ್ವಂತ ಊರು ಪಾವಗಡದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ನಾಗೇಂದ್ರನಿಗೆ ಒಂದೂವರೆ ವರ್ಷದ ಮಗನಿದ್ದು, ಆತನ ಪತ್ನಿಯೂ ಗರ್ಭಿಣಿ ಎಂದು ಪೊಲೀಸರು ತಿಳಿಸಿದ್ದಾರೆ.