ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಡಿಗೆ ಹೋಗಲೊಪ್ಪದ ಸಲಗ, ಆತಂಕದಲ್ಲಿ ವಾಸಿಗಳು

Rashmi Kasaragodu
Updated On : 12 Jul 2013, 11:25 am

ಕ.ಪ್ರ.ವಾರ್ತೆ, ಆನೇಕಲ್, ಜು. 11-
ಸತತ ಮೂರು ದಿನಗಳಿಂದ ನೆರೆಯ ಹೊಸೂರಿನಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗ,  ಅರಣ್ಯ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಕಾಡಿನ ದಾರಿ ಹಿಡಿಯದೇ ಊರಿನಲ್ಲೇ ಜಂಡಾ ಹೂಡಿ ಚಂಡಿ ಹಿಡಿದಿದೆ.
ಮಂಗಳವಾರ ಹೊಸೂರು ಹೊರ ವಲಯ ವೆಂಕಟೇಶ್ವರ ಹಾಗೂ ಮುತ್ತಾಳಿಯಲ್ಲಿ ಬೀಡು ಬಿಟ್ಟಿದ್ದ ಸಲಗ ಒಬ್ಬನನ್ನು ತುಳಿದು ಗಂಭೀರ ಗಾಯ ಮಾಡಿತ್ತು. ಅರಣ್ಯ ಸಿಬ್ಬಂದಿ ಆನೆಯನ್ನು ಕಾಡಿಗೆ ಓಡಿಸುವಲ್ಲಿ ಸಫಲರಾಗಿದ್ದರು. ಆದರೇ ಅದೇ ಆನೆ ಬುಧವಾರ ಸಂಜೆ ಮತ್ತೆ ಕಾಣಿಸುವ ಮೂಲಕ ಗ್ರಾಮಸ್ಥರ ಆತಂಕಕ್ಕೆ ಕಾರಣವಾಯಿತು. ಬುಧವಾರ ಸಂಜೆ ಡ್ರೈ ಮೆಟಲ್ ಕಂಪನಿಯ ಕಾಂಪೌಂಡ್ ಗೋಡೆಯನ್ನು ದಬ್ಬಿದ ಆನೆ ಸಮೀಪದ ಪೆಟ್ಟಿ ಅಂಗಡಿಯಲ್ಲಿದ್ದ ಬಾಳೆ ಹಣ್ಣು ಹಾಗೂ ಪರಂಗಿ ಹಣ್ಣನ್ನು ತಿಂದು ತಳ್ಳುಗಾಡಿಯನ್ನು ದಬ್ಬಿ ರಾತ್ರಿ ಸಮೀಪದ ತೋಪಿನಲ್ಲಿ ಆಶ್ರಯ ಪಡೆದಿತ್ತು.

ಶಾಲೆಗಳಿಗೆ ರಜೆ: ಗುರುವಾರ ಬೆಳಗ್ಗೆ ಸಿಪ್‌ಕಾಟ್ 2ನೇ ಹಂತದಲ್ಲಿ ಕಾಣಿಸಿಕೊಂಡ ಆನೆ ಅಶೋಕ ಲೈ ಲಾಂಡ್ ಕಂಪನಿ ಹಿಂಬದಿಯ ಕೆರೆಯಲ್ಲಿ ಕಾಣಿಸಿಕೊಂಡಿತು. ಇಡೀ ದಿನ ಕೆರೆ ಹಾಗೂ ಸಮೀಪದ ತೋಪಿನಲ್ಲಿದ್ದ ಆನೆ ಊರೊಳಗೆ ಬರಲಿಲ್ಲ. ಅಶೋಕ್ ಲೈಲಾಂಡ್ ನಡೆಸುವ ಶಾಲೆ ಹಾಗೂ ಇತರ 2 ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ.  ಆನೆ ನೋಡಲು ಬಂದ ಜನರನ್ನು ಅಟ್ಟುವುದೇ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗೆ ತಲೆ ನೋವಾಗಿದೆ. ಸಂಜೆಯಾದರೆ, ಆನೆ ತಾನೇ ತನ್ನ ಪಾಡಿಗೆ ಕಾಡಿಗೆ ಹೋಗುತ್ತದೆ. ಈ ಬಾರಿ ಆನೆಯನ್ನು ಆಳ ಕಾಡಿನೊಳಗೆ ಕಳಿಸಲಾಗುವುದು ಎಂದು ತಮಿಳು ನಾಡಿನ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement