ಕಾಮಗಾರಿಗಳ ಗುಣಮಟ್ಟ ಕಾಪಾಡಲು ಸಲಹೆ
ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಜು.11
ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಉಸ್ತವಾರಿ ಮಾಡುವ ಮೂಲಕ ಗುಣಮಟ್ಟ ಕಾಪಾಡಿಕೊಂಡು ಬರಬೇಕು ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ಎಚ್. ಸುರೇಶ್ ಅಭಿಪ್ರಾಯಪಟ್ಟರು.
ಅವರು ನಾರಸಂದ್ರ ಗ್ರಾಮ ಪಂಚಾಯ್ತಿಯ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪಂಚಾಯ್ತಿ ಮೊದಲ ಆದ್ಯತೆ ನೀಡಿದೆ. ಬೀದಿ ದೀಪ ನಿರ್ವಹಣೆ, ಪ್ರತಿ ಕುಟುಂಬಕ್ಕೊಂದು ಶೌಚಾಲಯ, ಆಶ್ರಯ, ಬಸವ ವಸತಿ ಯೋಜನೆ, ಇಂದಿರಾ ಅವಾಜ್ ಮನೆಗಳ ಪಟ್ಟಿ ತಯಾರಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತಿದೆ. ನಾರಸಂದ್ರ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾದರಿ ಗ್ರಾಮ ಪಂಚಾಯ್ತಿಯನ್ನಾಗಿಸಲು ಶ್ರಮಿಸಲಾಗುತ್ತಿದ್ದು, ಗ್ರಾಮದ ಅಭಿವೃದ್ಧಿಯೇ ಪಂಚಾಯ್ತಿ ಧ್ಯೇಯವಾಗಿದೆ ಎಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಜಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಇಓ ಕೆ.ಬಿ.ಅಕ್ಕೋಜಿ ಪಂಚಾಯ್ತಿಗಳಿಗೆ ದೊರಕುವ ಸೌಲತ್ತುಗಳ ಸಂಪೂರ್ಣ ಮಾಹಿತಿ ನೀಡಿದರು. ಗ್ರಾಮದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು. ಮನೆಗೊಂದು ಕಡ್ಡಾಯ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಗ್ರಾಮ ನೈರ್ಮಲ್ಯ ಕಾಪಾಡಿಕೊಂಡು ಬರಬೇಕು ಎಂದರು.
ಇದೇ ಸಂದರ್ಭದಲ್ಲಿ ನರೇಗ ಮತ್ತು ವಿವಿಧ ಇಲಾಖೆ ಯೋಜನೆಗಳ ಕುರಿತು ಕ್ರಿಯಾ ಯೋಜನೆಗೆ ಅನಮೋದನೆ ಪಡೆಯಲಾಯಿತು. ವಿವಿಧ ಯೋಜನೆಗಳಿಗೆ ಅರ್ಹ ಪಲಾನುಭವಿಗಳು ನೀಡಿದ ಅರ್ಜಿಗಳನ್ನು ಸಭೆಯಲ್ಲಿ ಸ್ವೀಕರಿಸಲಾಯಿತು. ನಾರಸಂದ್ರ ಗ್ರಾ.ಪಂ. ಉಪಾಧ್ಯಕ್ಷ ಕೆ.ವಿ. ಸುರೇಶ್, ಮಾಜಿ ಅಧ್ಯಕ್ಷ ರವಿಕುಮಾರ್, ಅಮಾನುಲ್ಲಾಖಾನ್, ಸದಸ್ಯರಾದ ಗಂಗಲಕ್ಷ್ಮಮ್ಮ, ಬೋರಮ್ಮ, ಮರಿಗೌಡ, ಚಿದಾನಂದಮೂರ್ತಿ, ಹನುಮಕ್ಕ, ಲೀಲಾವತಿ, ಯಶೋದಮ್ಮ, ಪಿಡಿಓ ಪಿ.ರಾಮಚಂದ್ರಯ್ಯ ಇತರರು ಇದ್ದರು.