ಕ್ಲೀನ್ ಪ್ಯಾಕೇಜಿಂಗ್ ಕಂಪನಿಯಿಂದ ಅಮಾನವೀಯತೆ: ಆರೋಪ
ಕ.ಪ್ರ.ವಾರ್ತೆ ಟಿ ಆನೇಕಲ್ಲು ಟಿ ಜು.11
ಬನ್ನೇರುಘಟ್ಟ ರಸ್ತೆ ಅರಕೆರೆಯ ಕ್ಲೀನ್ ಪ್ಯಾಕೇಜಿಂಗ್ ಕಂಪನಿ ಅಮಾನವೀಯತೆ ಮೆರೆಯುತ್ತಿದೆ ಎಂದು ಮಾತೃಭೂಮಿ ಕನ್ನಡ ಸೇನೆಯ ಅಧ್ಯಕ್ಷ ಬೇಗಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.
ಅವರು ಕಾರ್ಖಾನೆ ಮುಂದೆ ಕಾರ್ಮಿಕರು ಹಮ್ಮಿಕೊಂಡಿದ್ದ ಮುಷ್ಕರ ಹಾಗೂ ರಸ್ತೆ ತಡೆಯಲ್ಲಿ ಭಾಗವಹಿಸಿ ಮಾತನಾಡಿ ಪ್ಯಾಕೇಜಿಂಗ್ಘ್‌ಟಕದಲ್ಲಿ ಕೆಲಸ ಮಾಡುವಾಗ ಎಷ್ಟೋ ಕಾರ್ಮಿಕರ ಕೈ ಬೆರಳುಗಳನ್ನು ಹಾಗೂ ಸಾಗಿಸುವಾಗ ಕಾಲು ಬೆರಳುಗಳನ್ನು ಕಳೆದುಕೊಂಡು ಅಂಗವಿಕಲರು ಅಥವಾ ಕುರೂಪಿಗಳಾಗಿದ್ದಾರೆ. ಕಾರ್ಮಿಕರ ದುಡಿಮೆಯಿಂದ ಮೇಲೆ ಬಂದ ಮಾಲಿಕರು ಕಾರ್ಮಿಕರ ಕಲ್ಯಾಣದ ಬಗ್ಗೆ ಕಿಂಚತ್ತೂ ಕಾಳಜಿ ವಹಿಸದೇ ಸ್ವಾರ್ಥ ಮೆರೆಯುತ್ತಿರುವುದು ಖಂಡನೀಯ. ಈ ಕೂಡಲೇ ಗಾಯಾಳು ಕಾರ್ಮಿಕರ ಚಿಕಿತ್ಸಾ ವೆಚ್ಚವನ್ನು ಮಾಲೀಕರು ಭರಿಸಿ ಸಾಂತ್ವನ ಹೇಳಬೇಕು. ಅವಲಂಬಿತ ಕುಟುಂಬ ಸದಸ್ಯರಿಗೆ ಕನಿಷ್ಠ ಪಡಿತರ ಆಹಾರ, ಮಕ್ಕಳ ಶಿಕ್ಷಣ ವೆಚ್ಚ ನೀಡಬೇಕು. ಇಎಸ್‌ಐ, ಪಿಎಫ್, ಅಪಘಾತ ವಿಮೆ, ಜೀವ ವಿಮೆ ಹಾಗೂ ಉದ್ಯೋಗ ಭದ್ರತೆ ಬಗ್ಗೆ ವಾಗ್ದಾನ ನೀಡಬೇಕು. ಕೆಲಸದಿಂದ ತೆಗೆದು ಹಾಕಿರುವ ಗಾಯಾಳುಗಳಿಗೆ ಮತ್ತೆ ಉದ್ಯೋಗ ನೀಡಬೇಕು. ಇಲ್ಲದಿದ್ದಲ್ಲಿ ಅನಿರ್ದಿಷ್ಟ ಕಾಲ ಉಪವಾಸ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಷ್ಕರದಲ್ಲಿ ವಿವಿಧ ಅಂಗಗಳನ್ನು ಕಳೆದುಕೊಂಡಿರುವ ಹಾಗೂ ತೀವ್ರ ಗಾಯಗಳಿಂದ ವಿರೂಪವಾಗಿರುವ ಕೆಲ ನೌಕರರಿಗೆ ಮಂಜುನಾಥ್ಸ್‌ಹಾಯ ನೀಡಿದರು. ಗಾಯಾಳು ಕಾರ್ಮಿಕರಾಗ ಅನುಬಾಯಿ, ರಾಮಪ್ಪ, ರಘು, ಮುರಳಿ, ವನಜಾಕ್ಷಿ, ಸರಸ್ವತಿ ಹೇಮ ರವರು ತಮಗಾದ ಅನ್ಯಾಯ, ಕುಟುಂಬದಲ್ಲಿ ಮೂಡಿದ ಬಿರುಕು, ಬೇರೆಡೆ ಉದ್ಯೋಗ ಮಾಡಲು ಅವಕಾಶವಿಲ್ಲದ ವ್ಯಥೆಯನ್ನು ತೋಡಿಕೊಂಡರು.
ಹುಳಿಮಾವು ಪೊಲೀಸ್ ಠಾಣಾಧಿಕಾರಿಗಳು ಮುಷ್ಕರ ನಿರತರ ಮನವೊಲಿಸಿ ಮನೆಗೆ ತೆರಳುವಂತೆ ತಿಳಿಸಿ ಮಾಲೀಕರ ಜೊತೆ ಸಂಧಾನ ಮಾಡುವುದಾಗಿ ವಾಗ್ದಾನ ಮಾಡಿದರು. ಮಂಜುನಾಥ್ ಮಾಲೀಕರ ವಿರುದ್ಧ ಅಮಾನವೀಯತೆ ಹಾಗೂ ಕ್ರೌರ್ಯದ ದೂರು ದಾಖಲಿಸಿ ಸಾಮಾಜಿಕ ನ್ಯಾಯ ನೀಡುವಂತೆ ಮನವಿ ಮಾಡಿದರು.