ತೃತೀಯರಂಗಕ್ಕೆ ಕೇಂದ್ರದಲ್ಲಿ ಉಜ್ವಲ ಭವಿಷ್ಯ: ಎಚ್ಡಿಕೆ
ಕನಕಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದೆ. ತೃತೀಯರಂಗಕ್ಕೆ ಕೇಂದ್ರದಲ್ಲಿ ಉಜ್ವಲ ಭವಿಷ್ಯವಿದೆ, ಜಾತ್ಯತೀತ ಜನತಾದಳವು ಈ ಬಾರಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭಾ ವಿರೋಧಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಹಾರೋಹಳ್ಳಿ ಗ್ರಾಮದ ಚನ್ನಮ್ಮಮಾದಯ್ಯ ಸಮುದಾಯಭವನದಲ್ಲಿ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ 20ಕ್ಕಿಂತಲೂ ಹೆಚ್ಚು ಸ್ಥಾನ ಬರಲು ಸಾಧ್ಯವಾದರೆ ಕೇಂದ್ರದ ಭವಿಷ್ಯವನ್ನು ನಿರ್ಧರಿಸಲು ನಿರ್ಣಾಯಕ ಪಾತ್ರ ವಹಿಸಬಹುದು. ಈ ಹಿಂದೆ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ 16 ಸ್ಥಾನ ಗಳಿಸಿ ರಾಷ್ಟ್ರದ ಪ್ರಧಾನಿಗಳಾಗಿದ್ದು ಇತಿಹಾಸ ಎಂದು ಕುಮಾರಸ್ವಾಮಿ ನುಡಿದರು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಯಾತ್ರೀಕೃತ ಕಸಾಯಿಖಾನೆ ನಿರ್ಮಿಸಲು ಹೊರಟಿದ್ದು ಬಿಜೆಪಿ ಸರ್ಕಾರ, ಕಸಾಯಿಖಾನೆ ಸ್ಥಾಪಿಸಲು ಅನುಮತಿ ನೀಡಬಾರದೆಂದು ನಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಕೆಲವು ಕುಹಕಿಗಳು ನನ್ನ ಮತ್ತು ನನ್ನ ಪಕ್ಷದ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ಖಂಡನೀಯ ಎಂದರು.
ಕಳ್ಳರಂತೆ ಬಿಂಬ: ರಾಜ್ಯಸರ್ಕಾರದ ಅಸಮರ್ಪಕ ಮರಳು ಗಣಿಗಾರಿಕಾ ನೀತಿಯಿಂದಾಗಿ ಲಾರೀ ಮಾಲೀಕರುಗಳನ್ನು ಕಳ್ಳರಂತೆ ಬಿಂಬಿಸಲಾಗುತ್ತಿರುವುದು ವಿಷಾದನೀಯ. ಪ್ರತಿನಿತ್ಯ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗುತ್ತಿರುವ ಅವರ ಸಮಸ್ಯೆಯನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ ಕುಮಾರಸ್ವಾಮಿ ಅಧಿಕಾರಿಗಳು ಹಾಗೂ ಪೊಲೀಸರು ಯಾರನ್ನೋ ಮೆಚ್ಚಿಸಲು ಸಾಮಾನ್ಯರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಕೋರ್ಟ್ಗಳಿಗೆ ಅಲೆದಾಡಿಸುವ ಪರಿಪಾಠ ನಿಲ್ಲಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ.ರಾಜು, ಕೆ.ಎಲ್. ಶಿವಲಿಂಗೇಗೌಡ, ವಿಪ ಮಾಜಿ ಸದಸ್ಯ ಮರಿಲಿಂಗೇಗೌಡ, ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಡಿ.ಎಂ.ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ಪುರಸಭಾ ಸದಸ್ಯ ಪುಟ್ಟರಾಜು, ಬಿ.ನಾಗರಾಜು, ಸೋಮಸುಂದರ್ ಮತ್ತಿತರರು ಪಾಲ್ಗೊಂಡಿದ್ದರು.