ಪಡಿತರ ಚೀಟಿ ಪಡೆಯಲು ನೂಕುನುಗ್ಗಲು
ಕ.ಪ್ರ. ವಾರ್ತೆ, ಆನೇಕಲ್ಲು, ಜು.11-
ಕೆಜಿಗೆ ರೂ. 1 ರಂತೆ ಅಕ್ಕಿ ಪಡೆಯಲು ಬೇಕಾದ ದಾಖಲೆ ಹಾಗೂ ಹೆಬ್ಬೆಟ್ಟು ನೀಡಿ ಪಡಿತರ ಚೀಟಿ ಪಡೆಯಲು ಸಾರ್ವಜನಿಕರು ತಾಲೂಕು ಕಚೇರಿಗೆ ಸಹಸ್ರ ಸಂಖ್ಯೆಯಲ್ಲಿ ಬಂದಾಗ ಇದ್ದ ಕೆಲವೇ ಸಿಬ್ಬಂದಿಗೆ ನಿಯಂತ್ರಿಸಲಾಗಲಿಲ್ಲ. ಜನರ ನಿಯಂತ್ರಣಕ್ಕಾಗಿ ಪೊಲೀಸರ ಮೊರೆ ಹೊಕ್ಕಾಗಿ ಸ್ಥಳಕ್ಕೆ ಬಂದ ಪೊಲೀಸರು ಜನರಿಗೆ ಸರದಿ ಸಾಲಿನಲ್ಲಿ ಬರುವಂತೆ ಮನವಿ ಮಾಡಿದರು. ಮತ್ತು ಕ್ಯೂನಲ್ಲಿ ನಿಲ್ಲಿಸುವ ಪ್ರಯತ್ನ ಸಹ ಮಾಡಿದರು. ಮಹಿಳೆಯರಿಗೆ ಪ್ರತ್ಯೇಕ ಸಾಲು ಮಾಡಿ ಕೆಲಸ ಬೇಗ ಆಗಲು ಅನುವು ಮಾಡಿದರು. ಆದರೂ ನೂಕು ನುಗ್ಗಲು ತಳ್ಳಾಟ ಪ್ರಾರಂಭವಾದಾಗ ಸಿಬ್ಬಂದಿ ಮತ್ತು ಜನರ ನಡುವೆ ವಾಗ್ವಾದ ನಡೆಯಿತು. ಜನರ ನಿಯಂತ್ರಣ ಹಾಗೂ ಪಡಿತರ ಚೀಟಿ ಕಾರ್ಯ ನಡೆಸಲು ತೊಂದರೆ ಉಂಟಾದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಕೆಲ ಕಾಲ ತಾಲೂಕು ಕಚೇರಿ ಆವರಣದಲ್ಲಿ ಗೊಂದಲ ವಾತಾವರಣ ಉಂಟಾಗಿತ್ತು. ಜನರು ಕಾಲಿಗೆ ಬುದ್ಧಿ ಹೇಳಿ ದಿಕ್ಕಾ ಪಾಲಾಗಿ ಓಡಲಾರಂಭಿಸಿದರು.
ನಂತರ ತಹಸೀಲ್ದಾರ್ ಶಿವೇಗೌಡ ಸ್ಥಳಕ್ಕೆ ಆಗಮಿಸಿ ಜನರ ಮನಮೊಲಿಸಿ ಪಡಿತರ ಚೀಟಿ ಎಲ್ಲರಿಗೂ ಸಿಗಲು ಬೇಕಾದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಕಂಪ್ಯೂಟರ್ಗಳು ಹಾಗೂ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಧಿಕಾರಿ ಗಳನ್ನು ಸಂಪರ್ಕಿಸಲಾಗುವುದು. ಜನತೆ ತಾಳ್ಮೆಯಿಂದ ಸಹಕಾರ ನೀಡಬೇಕೆಂದು ಕೋರಿದರು. ನಂತರ ಸರದಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಕಾರ್ಡ್ ಪೂರೈಕೆ ಸುಗಮವಾಗಿ ನೆರವೇರಿತು.