ಪರ್ಮಿಟ್ ವ್ಯವಸ್ಥೆ ಜಾರಿಗೊಳಿಸಲಿ: ಷಣ್ಮುಗಪ್ಪ
ನೆಲಮಂಗಲ: ಮರಳು ಸಾಗಿಸಲು ಮರಳು ಲಾರಿ ಮಾಲೀಕರಿಗೆ ಇಂತಷ್ಟು ಹಣ ಎಂದು ನಿಗದಿಗೊಳಿಸುವ ಮೂಲಕ ತಿಂಗಳ ಪರ್ಮಿಟ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದರು.
ಅವರು ಗುರುವಾರ ತಾಲೂಕಿನ ದಾಬಸ್ಪೇಟೆಯ ಕೆಂಗಲ್ ಕೆಂಪೋಹಳ್ಳಿ ಬಳಿ ಮರಳು ಲಾರಿ ಮಾಲೀಕರ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡುತ್ತಾ ರಾಜ್ಯದೆಲ್ಲೆಡೆ ಮರಳು ಲಾರಿಗಳಿಗೆ ಕೆಲ ಭ್ರಷ್ಟ ಪೊಲೀಸರು ಗಣಿ, ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಿರುಕುಳ ಮಿತಿಮೀರಿದೆ ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದರು.
ಲಾರಿ ಮಾಲೀಕರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಅಸಡ್ಡೆಯ ಪರಿಣಾಮವಾಗಿ ಲಾರಿ ಮಾಲೀಕರು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗಿದೆ. ಇದರಿಂದ 2500 ಲಾರಿ ಮಾಲೀಕರು ಹಾಗೂ 2 ಲಕ್ಷ ಜನ ಕೂಲಿ ಕೆಲಸಗಾರರು ಜೀವನ ಸಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸೋಂಪುರ ಹೋಬಳಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಗದೀಶ್ ಚೌದರಿ, ಸಂಘದ ಕಾರ್ಯದರ್ಶಿ ನಾರಾಯಣಪ್ಪ, ಲಾರಿ ಮಾಲೀಕರಾದ ವಿನೋದ್ಕುಮಾರ್, ಅನಂತ್, ಲೋಕೇಶ್, ರುದ್ರೇಶ್ ಸೇರಿದಂತೆ ನೂರಾರು ಲಾರಿ ಮಾಲೀಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.