ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು
ವಿಜಯಪುರ: ಪೋಷಕರು ಮಕ್ಕಳನ್ನು ಶುಭ್ರವಾದ ಸಮವಸ್ತ್ರದೊಂದಿಗೆ ಸರಿಯಾದ ಸಮಯಕ್ಕೆ ಅಂಗನವಾಡಿಗೆ ಕಳುಹಿಸಬೇಕು ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಜೆ.ಎನ್. ಶ್ರೀನಿವಾಸ್ ತಿಳಿಸಿದರು.ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ಅಂಗನವಾಡಿ ಮಕ್ಕಳ ಆಟಿಕೆ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದರಿಂದ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಜೊತೆಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವೇದಾಂತ ಫೌಂಡೇಷನ್ನ ಸಂಯೋಜನಾಧಿಕಾರಿ ರವೀಂದ್ರ ಜೈನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಹನೀಫುಲ್ಲಾ ಮಾತನಾಡಿ, ವೇದಾಂತ ಸಂಸ್ಥೆಯು ಅಂಗನವಾಡಿ ಯೋಜನೆಯ ಅಡಿಯಲ್ಲಿ ಓರಿಸ್ಸಾ, ರಾಜಸ್ತಾನ್, ಚತ್ತಿಸ್ಘಡ್ ಮತ್ತು ಕರ್ನಾಟಕದಲ್ಲಿ 2008ರಿಂದ ಸುಮಾರು 5ಲಕ್ಷ ಮಕ್ಕಳು ಮತ್ತು 14000 ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅಂಗನವಾಡಿಯ 3-6 ವರ್ಷದ ಮಕ್ಕಳಿಗೆ ಉಚಿತ ಸಮವಸ್ತ್ರ, ಒಂದು ಸಮಯದ ಪೌಷ್ಟಿಕಾಂಶಯುಕ್ತ ಆಹಾರ, ಒದಗಿಸುತ್ತಿದ್ದೇವೆ. ಇದಲ್ಲದೆ ಪ್ರತಿ ಅಂಗನವಾಡಿ ಕೇಂದ್ರಗಳಿಗೆ 1000 ರು.ಮೌಲ್ಯದ ಆಟಿಕೆ ವಸ್ತುಗಳನ್ನು ವಿತರಿಸುತ್ತಿದ್ದೇವೆ ಎಂದರು.
'ಯುವಕರಲ್ಲಿರಲಿ ಸಮಾಜ ಸೇವೆ '
ಸೂಲಿಬೆಲೆ: ರಾಜಕಾರಣದ ಮೂಲಕ ಯುವ ನಾಯಕರು ಸಮಾಜ ಸೇವೆಯತ್ತ ಹೆಚ್ಚಿನ ಗಮನಹರಿಸಬೇಕು ಎಂದು ಕಾಂಗ್ರೆಸ್ ಯುವ ನಾಯಕ ರಾಜೇಶ್ ಹೇಳಿದ್ದಾರೆ. ಸೂಲಿಬೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿ ಈ ಮೂಲಕ ಸಮಾಜ ಸೇವೆ ಮಾಡಲು ಮುಂದಾಗಬೇಕು. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಲ್ಲಿ ಯುವಕರ ಪಾತ್ರ ಬಹು ಮುಖ್ಯವಾಗಿದೆ. ನನ್ನ ತಂದೆ ಹೊಸಕೋಟೆ ಕ್ಷೇತ್ರದ ಶಾಸಕ ಎನ್.ನಾಗರಾಜ್ ಅಧಿಕಾರದ ಆಸೆಗಾಗಿ ರಾಜಕಾರಣಕ್ಕೆ ಬಂದಿಲ್ಲ. ಸಮಾಜ ಸೇವೆಯ ಮುಖ್ಯ ಗುರಿಯಾಗಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಕೈ ಹಿಡಿದು ಆರ್ಶಿವಾದ ಮಾಡಿರುವ ಕಾರಣ ಕ್ಷೇತ್ರದ ಅಭಿವೃದ್ಧಿಗೆ ದುಡಿಯಲು ಕಾರಣವಾಗಿದೆ ಎಂದರು.
ಕಾನೂನು ಸಾಕ್ಷರತಾ ರಥ ಅಭಿಯಾನ
ಕನಕಪುರ: ರಾಮನಗರ ಜಿಲ್ಲಾ ಕಾನೂನು ಸೇವಾಪ್ರಾಧಿಕಾರ ಹಾಗೂ ವಕೀಲರ ಸಂಘ ಕನಕಪುರ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾನೂನು ಸಾಕ್ಷರತಾ ರಥ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆಯಿತು. ಕಾನೂನು ಸಾಕ್ಷರತಾ ಅಭಿಯಾನಕ್ಕೆ ವಕೀಲರ ಸಂಘದ ಅಧ್ಯಕ್ಷ ಮುತ್ತೇಗೌಡ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.