ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಜನಸಂಖ್ಯೆ ನಿಯಂತ್ರಣದಿಂದ ದೇಶ ಅಭಿವೃದ್ಧಿ'

Rashmi Kasaragodu
Updated On : 13 Jul 2013, 12:56 pm

ರಾಮನಗರ: ದೇಶದಲ್ಲಿ ಸರ್ವರಿಗೂ ಮೂಲಭೂತ ಸೌಲಭ್ಯಗಳು ದೊರಕುವಂತಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಬೇಕಾದರೆ ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ರಘುನಾಥ್ ಹೇಳಿದರು.  
ಜಿಲ್ಲಾಡಳಿತ, ಜಿಪಂ, ನಗರಸಭೆ, ವಿವಿಧ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ನಗರಸಭೆಯ ಪ್ರಶಸ್ತಿ ಭವನದಲ್ಲಿ ಗುರುವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆ ನಿಯಂತ್ರಣಕ್ಕಾಗಿ ಕುಟುಂಬ ಯೋಜನೆ ಜಾರಿಗೊಳಿಸಲಾಗಿದೆ. ಈ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಅರಿವು ಮೂಡಿಸುವುದು ಅಗತ್ಯ. ಜನಸಂಖ್ಯೆ ಹೆಚ್ಚಳದಿಂದ ಆಗುವ ತೊಂದರೆ, ಅನಾಹುತಗಳ ಬಗ್ಗೆಯೂ ಎಚ್ಚರಿಕೆ ನೀಡಬೇಕು ಎಂದರು.
ಕುಟುಂಬದಲ್ಲಿ ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ ತಿಳಿವಳಿಕೆ ನೀಡಬೇಕು. ಒಂದು ಅಥವಾ ಎರಡು ಮಕ್ಕಳಿದ್ದರೆ ಸಾಕು. ಹೆಚ್ಚು ಮಕ್ಕಳಿದ್ದ ಕುಟುಂಬದಲ್ಲಿ ನೆಮ್ಮದಿ ಹಾಳಾಗುತ್ತದೆ. ಇತ್ತೀಚೆಗೆ ಕುಟುಂಬ ಯೋಜನೆ ಪರಿಣಾಮಕಾರಿ ಜಾರಿಯಾಗುತ್ತಿದೆ ಎಂದರು.
ರಾಮನಗರದ ಎಂ.ಎಚ್.ನರ್ಸಿಂಗ್ ಶಾಲೆಯ ಪ್ರಾಂಶುಪಾಲ ಬಿಂದುಸಾರ ಮಾತನಾಡಿ, ಜನಸಂಖ್ಯಾ ಸ್ಫೋಟದಿಂದ ಅನಾನುಕೂಲವೇ ಹೆಚ್ಚು. ಒಂದು ಬೇಕು, ಎರಡು ಸಾಕು ಎನ್ನುವ ಘೋಷಣೆಗೆ ನಾವೆಲ್ಲಾ ಬದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿ ಡಾ. ಸುಲೋಚನ ಮಾತನಾಡಿ, ಮದುವೆಯ ಹೆಣ್ಣಿನ ವಯಸ್ಸು 18 ಮತ್ತು ಗಂಡಿನ ವಯಸ್ಸು 21 ದಾಟಿರಲೇಬೇಕು.
 ಬಾಲ್ಯ ವಿವಾಹ ಪದ್ಧತಿಯನ್ನು ಕೊನೆಗಾಣಿಸುವುದೂ ಜನಸಂಖ್ಯಾ ಸ್ಫೋಟ ತಡೆ ನಿಟ್ಟಿನಲ್ಲಿ ಉಪಯುಕ್ತ ಎಂದರು.  
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮುತ್ತೇಗೌಡ ಮಾತನಾಡಿ, ಜನಸಂಖ್ಯೆ ಹೆಚ್ಚಳವು ಶ್ರೀಮಂತ ದೇಶಗಳಿಗೆ ವರವಾದರೆ, ನಮ್ಮಂತಹ ಹಿಂದುಳಿದ ದೇಶಗಳಿಗೆ ಶಾಪವಾಗಿ ಪರಿಣಮಿಸಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಸಂಕಲ್ಪ ತೊಡಬೇಕು ಎಂದರು.  
ತಾಲೂಕು ಆರೋಗ್ಯಾಧಿಕಾರಿ ಡಾ. ಖಲೀಲ್, ಸಹಾಯಕ ವಾರ್ತಾಧಿಕಾರಿ ಸಿದ್ದಯ್ಯ, ಗುತ್ತಲೆಗೌಡ, ನಗರಸಭೆ ಸಿಎಒ ರಾಮಕೃಷ್ಣ, ಆರೋಗ್ಯಾಧಿಕಾರಿ ಶ್ರಿನಿವಾಸನ್, ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement