ಮೊಬೈಲ್, ಟಿವಿಗಳಿಂದ ಮಕ್ಕಳನ್ನು ದೂರವಿಡಿ
ವಿಜಯಪುರ: ತಂತ್ರಜ್ಞಾನ ಆವಿಷ್ಕಾರಗಳೊಂದಿಗೆ ಬಂದಂತಹ ಮೊಬೈಲ್, ಟೆಲಿವಿಷನ್ಗಳಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಏಕೆಂದರೆ ಇವುಗಳಿಂದ ಶಿಕ್ಷಣಕ್ಕೆ ಬೇಕಾದ ಏಕಾಗ್ರತೆ ಕಡಿಮೆಯಾಗುತ್ತಿದೆ ಎಂದು ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಎನ್.ರಮೇಶ್ ತಿಳಿಸಿದರು.
ಅವರು ಇಲ್ಲಿನ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದ ಪ್ರಾರ್ಥನಾ ಮಂದಿರದಲ್ಲಿ ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ವಿದ್ಯಾ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದು ಮಕ್ಕಳ ಶಿಕ್ಷಣಕ್ಕ ಅನುಕೂಲವಾಗುವ ಪರಿಕರಗಳನ್ನು ವಿತರಿಸುತ್ತಿರುವುದು ಶ್ಲಾಘನೀಯವಾದುದು. ಅನ್ನದಾನಕ್ಕಿಂತ ಶ್ರೇಷ್ಠವಾದುದು ಅಕ್ಷರದಾಸೋಹವಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಮುಂದಿನ ಜೀವನ ಹಸನಾಗುತ್ತದೆ ಎಂದರು.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರುವೆಂಬಂತೆ ಮನೆಯಲ್ಲಿ ಮಕ್ಕಳ ಶಿಕ್ಷಣದ ಜೊತೆಗೆ ಜೀವನದ ಕೌಶಲ್ಯ ಮೌಲ್ಯಗಳ ಬಗ್ಗೆ ಕಲಿಸಬೇಕು ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಜೀತ್ ಮಾತನಾಡಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ನೀಡುತ್ತಿರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಘದ ಖಜಾಂಜಿ ವಿಶ್ವನಾಥ್ ಸಂಘಕ್ಕೆ ಪುದುವುಟ್ಟು ನೀಡಿದವರ ವಿವರಣೆ ನೀಡಿದರು. ಸಂಘದ ಮಾಜಿ ಅಧ್ಯಕ್ಷ ಮುರಳಿ ,ಗೌರವಾಧ್ಯಕ್ಷ ಬಸವರಾಜು, ಪದಾಧಿಕಾರಿಗಳು ಸದಸ್ಯರು ಪೋಷಕರು ಮತ್ತು ಮಕ್ಕಳು ಹಾಜರಿದ್ದರು.