ರಾಮನಗರ ಜಿಲ್ಲೆಗೆ ಸಿಕ್ಕಿದ್ದು ಕವಡೆ ಕಾಸು
ಮತ್ತೀಕೆರೆ ಜಯರಾಮ್
ಕನ್ನಡಪ್ರಭ ವಾರ್ತೆ ರಾಮನಗರ ಜು.12
ಸಮ್ಮಿಶ್ರ ಸರ್ಕಾರವಿದ್ದಾಗ ಜಿಲ್ಲೆಯಾಗಿ ಅಸ್ತಿತ್ವದೊಂದಿಗೆ ವೈಭವ ಕಂಡ ರಾಮನಗರವು ಬಿಜೆಪಿ ಸರ್ಕಾರವಿದ್ದಾಗ ಕಡೆಗಣಿಸಲ್ಪಟ್ಟಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದ ಹುಂಡಿಯಲ್ಲಿ ಈ ಜಿಲ್ಲೆಗೆ ಸಿಕ್ಕಿದ್ದು ಕವಡೆ ಕಾಸಿನ ಕೊಡುಗೆಯಷ್ಟೇ.
ಮಾಗಡಿ ತಾಲೂಕಿಗೆ ಒಂದಿಷ್ಟು ಅನುಕೂಲದ ಹೊರತಾಗಿ ರಾಮನಗರ ಜಿಲ್ಲೆಯ ಇತರೆಡೆಗೆ ಹೇಳಿಕೊಳ್ಳುವ ಕೊಡುಗೆಗಳೇನಿಲ್ಲ. ಕಾಂಗ್ರೆಸ್ ಸರ್ಕಾರದ ಚೊಚ್ಚಲ ಆಯವ್ಯಯದಲ್ಲಿ ಜಿಲ್ಲೆ ಪಾಲಿಗೆ ಸಿಹಿಗಿಂತ ಕಹಿಯೇ ಹೆಚ್ಚೆನ್ನುವ ಅಸಮಾಧಾನ ವ್ಯಕ್ತವಾಗುತ್ತಿದೆ.
ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆಗೆ ರು.1 ಸಾವಿರ ಕೋಟಿ ಮತ್ತು ಡಾ.ಪರಮಶಿವಯ್ಯ ವರದಿಯನ್ನಾಧರಿಸಿ ವಿಸ್ತೃತ ವರದಿ ತಯಾರಿಸುವ ಜತೆಗೆ ಸರ್ವೇ ನಡೆಸಲು ರು.50 ಲಕ್ಷ ಘೋಷಣೆಯಿಂದ ಇಲ್ಲಿನವರಿಗೂ ಅಲ್ಪ ತೃಪ್ತಿಯಾಗಿದೆ.
ರಾಮನಗರವು ಕೃಷಿ ಮತ್ತು ತೋಟಗಾರಿಕೆ ಜತೆಗೆ ಕೈಗಾರಿಕಾ ಪ್ರದೇಶವೂ ಹೌದು. ಈ ಮೂರು ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ತರ ಕೊಡುಗೆ ಇಲ್ಲವೇ ಇಲ್ಲ. ಆಯವ್ಯಯದಲ್ಲಿ ರಾಮನಗರ ಜಿಲ್ಲೆಯ ಮೂಗಿಗೆ ತುಪ್ಪ ಸವರುವ ಕೆಲಸವಷ್ಟೇ ನಡೆದಿರುವುದು ಸ್ಪಷ್ಟ.ಯೋಜನೆ ಹಳೆಯದು: ಮಾಗಡಿಗೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಶ್ರೀರಂಗ ಏತ ನೀರಾವರಿ ಯೋಜನೆ ಸರ್ವೇಗೆ ರು.5 ಕೋಟಿ ಮಂಜೂರು ಮಾಡಲಾಗಿದೆ. ವಾಸ್ತವದಲ್ಲಿ ಸದರಿ ಯೋಜನೆಯ ಸರ್ವೇ ಕಾರ್ಯ ಜೆ.ಎಚ್.ಪಟೇಲ್ ಹಾಗೂ ಎಸ್.ಎಂ.ಕೃಷ್ಣ ಅಧಿಕಾರಾವಧಿಯಲ್ಲೇ ನಡೆದಿದೆ. ಈಗ ಪುನರ್ ಸರ್ವೇ ಕೆಲಸವಷ್ಟೇ ನಡೆಯಬೇಕಿದೆ. ಅಂತೆಯೇ ಮಾಗಡಿ ಪಟ್ಟಣಕ್ಕೆ ದಿನದ 24 ತಾಸು ಕುಡಿವ ನೀರು ಪೂರೈಕೆ ಘೋಷಣೆ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವಿದ್ದಾಗಲೇ ಆಗಿತ್ತು. ಈಗ ಯೋಜನೆ ಜಾರಿಯ ಬಗ್ಗೆ ಮತ್ತೊಮ್ಮೆ ಪ್ರಸ್ತಾಪವಾಗಿದೆ. ರಾಮನಗರಕ್ಕೆ ಲೋಕಲ್ ಟ್ರೇನ್, ಅರ್ಕಾವತಿ ಪುನರುಜ್ಜೀವನ, ವೃಷಭಾವತಿಯಲ್ಲಿ ಮಳೆ ನೀರು ಕಣಿವೆನಿರ್ಮಾಣ, ರಾಮದೇವರ ಬೆಟ್ಟದಲ್ಲಿ ಅಭಯಾರಣ್ಯ ಸ್ಥಾಪನೆ, ಒಂದು ವೃದ್ಧಾಶ್ರಮ ಮಂಜೂರು ಇವಷ್ಟೇ ಕೊಡುಗೆಗಳು.
ಯೋಜನೆ ಪ್ರಸ್ತಾಪವಿಲ್ಲ: ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ರಾಮನಗರಕ್ಕೆ ಮಂಜೂರಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಚಾಲನೆ ನೀಡುವ ಪ್ರಸ್ತಾಪ ಈ ಬಜೆಟ್ನಲ್ಲಿ ಆಗಿಲ್ಲ. ಇದು ಈ ಭಾಗದ ಜನತೆಗೆ ದೊಡ್ಡ ಮಟ್ಟದ ನಿರಾಸೆಯನ್ನು ಮೂಡಿಸಿದೆ. ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು, 750 ಹಾಸಿಗೆಗಳ ಹೈಟೆಕ್ ಮತ್ತು 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಒಳಗೊಂಡ ರಾಜೀವ್ ಗಾಂಧಿ ವಿವಿ ಯೋಜನೆಗೆ ಬಿಜೆಪಿ ಸರ್ಕಾರ ಕಲ್ಲು ಹಾಕಿತ್ತು.
ಈಗ ಮತ್ತೆ ರಾಮನಗರ ಜನತೆಗೆ ಹೋರಾಟಕ್ಕೆ ಇಳಿಯಬೇಕಿದೆ. ಕಾವೇರಿ ಕೊಳ್ಳದ ಯೋಜನೆಗಳ ಅನುಷ್ಠಾನ ವಿಷಯದ ಘೋಷಣೆಯಲ್ಲಿ ಚನ್ನಪಟ್ಟಣದ ಬಗ್ಗೆ ಉಲ್ಲೇಖವಿಲ್ಲ. ಹಿಂದೆ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುವ ಸಾಕಷ್ಟು ಯೋಜನೆಗಳಿಗೆ ಹಣ ಮೀಸಲಿಟ್ಟರೂ ಚನ್ನಪಟ್ಟಣದ ಯೋಜನೆಗಳಿಗೆ ಹಣದ ಪ್ರಸ್ತಾಪವಾಗಿಲ್ಲ.
ಘೋಷಣೆಗೆ ಸೀಮಿತ: ಬೆಂಗಳೂರಿಗೆ ಪರ್ಯಾಯವಾಗಿ ರಾಮನಗರವನ್ನು ಅಭಿವೃದ್ಧಿಪಡಿಸುತ್ತೇವೆ ಎನ್ನುವ ಘೋಷಣೆ ಜಾರಿಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವೂ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಬೆಂಗಳೂರಿಗೆ ಬೇಡವಾದ ಕಸ, ಕಲುಷಿತ ನೀರು, ಕಸಾಯಿಖಾನೆಗಷ್ಟೇ ರಾಮನಗರ ಸೀಮಿತವಾದಂತಿದೆ. ಚಾಮರಾಜನಗರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಘೋಷಿಸಿದ ಮಾದರಿಯಲ್ಲೇ ರಾಮನಗರ ಜಿಲ್ಲೆಗೂ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಪ್ರತ್ಯೇಕ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬೇಕೆನ್ನುವ ಕೂಗಿಗೆ ಸಿದ್ದರಾಮಯ್ಯ ಅವರಿಂದಲೂ ಸ್ಪಂದನೆ ಸಿಕ್ಕಿಲ್ಲ. ಆಯವ್ಯಯದಲ್ಲಿ ಬೆಂಗಳೂರು, ಮೈಸೂರಿಗೆ ಒತ್ತು ನೀಡಿದ್ದು, ಉಭಯ ಮಹಾನಗರಗಳ ನಡುವೆ ಇರುವ ರಾಮನಗರ, ಮಂಡ್ಯವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಬೆಂಗಳೂರು-ಮೈಸೂರು ನಡುವಿನ ಚತುಷ್ಪಥದ ಮಾರ್ಗ ಆರು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ನಿರೀಕ್ಷೆ ಹುಸಿಯಾಗಿದೆ.