ಅಪರಾಧ ಸುದ್ದಿ
ಹಿಂದಕ್ಕೆ ಚಲಿಸಿದ ಲಾರಿಗೆ ಬಾಲಕ ಬಲಿ
ಬೆಂಗಳೂರು: ಮಿನಿ ಲಾರಿ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚಪ್ಪರದಕಲ್ಲು ಮುಖ್ಯರಸ್ತೆ ಗುಡೇನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ನಂದೀಶ್ ಮೃತ ಬಾಲಕ. ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಬಾಲಕ ವಾಸಿಸುತ್ತಿದ್ದ ಮನೆ ಸಮೀಪದಲ್ಲಿ ಸಿಮೆಂಟ್ ಇಟ್ಟಿಗೆ ಕಾರ್ಖಾನೆಯಿದ್ದು, ಅಲ್ಲಿಗೆ ಲೋಡ್ ಹಾಗೂ ಅನ್‌ಲೋಡ್ ಮಾಡಲು ಲಾರಿಗಳು ಬರುತ್ತಿದ್ದವು. ಶುಕ್ರವಾರ ಮಿನಿಲಾರಿಯೊಂದು ಸಿಮೆಂಟ್ ಲಾರಿ ಇಟ್ಟಿಗೆ ತೆಗೆದುಕೊಂಡು ಬಂದಿತ್ತು. ಈ ವೇಳೆ ಲಾರಿ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ಚಾಲಕ ಆಟವಾಡುತ್ತಿದ್ದುದನ್ನು ಗಮನಿಸಿಲ್ಲ. ಹಾಗಾಗಿ ಬಾಲಕ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ನಾಗಪ್ಪ ಲಾರಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ವಾಹನ ವಶಕ್ಕೆ ತೆಗೆದುಕೊಂಡಿರುವ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು, ಮಿನಿಲಾರಿ ಚಾಲಕನ ನಿರ್ಲಕ್ಷ್ಯದ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ವಿಷ ಸೇವಿಸಿ ಕಾರ್ಮಿಕ ಆತ್ಮಹತ್ಯೆ
ಮಾಗಡಿ: ಹೊಟೇಲ್ ಕಾರ್ಮಿಕನೊಬ್ಬ ಕ್ರಿಮಿನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದ ಹೊಟೇಲ್‌ನಲ್ಲಿ ಶನಿವಾರ ನಡೆದಿದೆ. ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿರುವ ಗಾಯಿತ್ರಿ ಹೋಟೆಲ್‌ನಲ್ಲಿ ಕಾರ್ಮಿಕನಾಗಿದ್ದ ಆಂಜನೇಯ(20) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಈತ ಮೂಲತಹ ಕುಣಿಗಲ್ ತಾಲೂಕಿನ ಹೆಬ್ಬೂರು ಗ್ರಾಮವಾಸಿ ಎಂದು ಹೇಳಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮಾಗಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗುರುತಿನ ಚೀಟಿ ಪಡೆಯಲು ಮನವಿ
ದೇವನಹಳ್ಳಿ: ತಾಲೂಕಿನ ಒಕ್ಕಲಿಗ ಜನಾಂಗದವರು ರಾಜ್ಯ ಒಕ್ಕಲಿಗರ ಸಂಘದಲ್ಲಿ ಸದಸ್ಯತ್ವ ಹಣ ಪಾವತಿಸಿರುವವರು ತಮ್ಮ ಗುರುತಿನ ಚೀಟಿಯನ್ನು ದೇವನಹಳ್ಳಿಯ ಒಕ್ಕಲಿಗರ ಸಂಘದ ಕಾರ್ಯಾಲಯದಲ್ಲಿ ಜುಲೈ 15, 16 ಹಾಗೂ 17 ರಂದು ಪಡೆಯಬಹುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಎ. ಶಿವರಾಮಯ್ಯ ತಿಳಿಸಿ ರಸೀತಿ ಇಲ್ಲದವರು ಜುಲೈ 21 ರಂದು ನಡೆಯುವ ಮಹಾಸಭೆಯ ಆಹ್ವಾನ ಪತ್ರಿಕೆ ತಂದು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಇಂದು ಗಾಳಿಪಟ ಹಾರಿಸುವ ಸ್ಪರ್ಧೆ
ದೊಡ್ಡಬಳ್ಳಾಪುರ: ಇಲ್ಲಿನ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘ ನೇತೃತ್ವದಲ್ಲಿ 6ನೇ ವರ್ಷದ ಗಾಳಿಪಟ ಹಾರಿಸುವ ಸ್ಪರ್ಧೆ ಚಿಕ್ಕತುಮಕೂರು ರಸ್ತೆಯಲ್ಲಿರುವ ಗುಂಡಪ್ಪನ ಬಯಲು ಮೈದಾನದಲ್ಲಿ ಜು.14ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸಂಜೆ 3.30ಕ್ಕೆ ನಡೆಯುವ ಸಂಘದ ಅಧ್ಯಕ್ಷ ಎಸ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸುವರು.