ಹಸು ಅಡ್ಡಬಂದು ಸರಣಿ ಅಪಘಾತ: ಕೇಂದ್ರ ಸಚಿವ ಮೊಯ್ಲಿ ವಾಹನಕ್ಕೂ ಡಿಕ್ಕಿ
ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಬೂದಿಹಾಲ್ ಬಳಿ ಹಸುವೊಂದು ವಾಹನವೊಂದಕ್ಕೆ ಅಡ್ಡ ಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ನೆಲಮಂಗಲ ಮೂಲಕ ತುಮಕೂರಿಗೆ ತೆರಳುತ್ತಿದ್ದಾಗ ಬೆಂಗಾವಲು ಪೊಲೀಸರು ಚಲಿಸುತ್ತಿದ್ದ ಸುಮೋ ವಾಹನದ ಮುಂದಿದ್ದ ಬುಲೇರೋ ವಾಹನಕ್ಕೆ ಹಸುವೊಂದು ಅಡ್ಡ ಬಂದ ಪರಿಣಾಮ ಬುಲೇರೋ ವಾಹನ ಹಿಂದಿದ್ದ ಸಚಿವರ ಬೆಂಗಾವಲು ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬೆಂಗಾವಲು ಪೊಲೀಸ್ ವಾಹನಕ್ಕೆ ಸಚಿವರ ವಾಹನ ಡಿಕ್ಕಿ ಹೊಡೆಯುವ ಮೂಲಕ ಸರಣಿ ಅಪಘಾತ ಸಂಭವಿಸಿದೆ.
ಸಚಿವರ ಕಾರಿನ ಹಿಂಭಾಗದ ಸಿಪ್ಟ್ ಕಾರು ಕೂಡ ಅಪಘಾತದಲ್ಲಿ ಜಖಂಗೊಂಡಿದೆ ಈ ಅಪಘಾತದಲ್ಲಿ ಇಬ್ಬರು ಪೊಲೀಸರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.