ಕಷ್ಟ, ಸುಖದಲ್ಲಿ ಪಾಲ್ಗೊಳ್ಳುವುದೇ ನಿಜವಾದ ಸ್ನೇಹ
ಕ.ಪ್ರ.ವಾರ್ತೆ ಮಾಗಡಿ ಜು.14
ಸರಸವೇ ಜೀವನ, ವಿರಸವೇ ಮರಣ. ಸ್ನೇಹವನ್ನು ನಂಬಿಕೆ ಅರ್ಹ ತಳಹದಿಯ ಮೇಲೆ ನಿರ್ಮಿಸಿ ಕಷ್ಟ, ಸುಖ ಎರಡರಲ್ಲೂ ಪಾಲ್ಗೊಳ್ಳುವುದೇ ನಿಜವಾದ ಸ್ನೇಹ, ಅದುವೇ ಸ್ನೇಹ ಸಂಗಮ ಎಂದು ವೈಭವ ಲಕ್ಷ್ಮೀ ಮೆಡಿಕಲ್ ಮಾಲೀಕ ಪ್ರಕಾಶ್ ತಿಳಿಸಿದರು.
ಅವರು ಮಾಗಡಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದ ಸನ್ನಿದಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸ್ನೇಹ ಸಂಗಮ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ನೇಹ ಎಂಬುದು ಮರೆಯಲಾರದ ನೆನಪು, ಹಳೆಯದನ್ನು ನೆನಪಿಸುವುದೇ ಸ್ನೇಹ ಸಂಗಮದ ಕೆಲಸವಾಗದೆ, ಬೌದ್ಧಿಕ ವಿಚಾರಗಳನ್ನು ಅವಲೋಕಿಸಬೇಕು. ಮನಸ್ಸಿನ ಭಾವನೆಗಳಿಗೆ ಸ್ಪಂದಿಸಬೇಕು.
ಕಷ್ಟ, ಸುಖಗಳಲ್ಲಿ ಭಾಗಿಯಾಗಬೇಕು. ಸಮಾಜ ಮುಖಿ ಸೇವೆಗೆ ಸದಾ ಸಿದ್ಧರಾಗಬೇಕು. ಸ್ನೇಹ ಸಂಗಮದ ಹೆಸರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಸ್ನೇಹ ಸಮ್ಮಿಲ್ಲನದ ಸೇತುವೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ನಿರ್ಮಿಸಲು ಜಾಗೃತರಗೋಣ ಎಂದರು.
ವಿಜಯಲಕ್ಷ್ಮೀ ಮಾತನಾಡಿ, ತಾಲೂಕಿನ ಹುಲೀಕಲ್ ಗ್ರಾಮದ ರಾಷ್ಟ್ರ ಪ್ರಶಸ್ತಿ ವಿಜೇತೆ ಹಿರಿಯಜ್ಜಿ ಸಾಲು ಮರದ ತಿಮ್ಮಕ್ಕ ಸಾಲು ಸಾಲು ಗಿಡಗಳನ್ನು ನೆಟ್ಟಿದರು, ಇಂದು ಹೆಮ್ಮರವಾಗಿ ಬೆಳದು ನಿಂತಿವೆ. ರಾಷ್ಟ್ರಕ್ಕೆ ತನ್ನ ಕೊಡುಗೆಯನ್ನು ನೀಡುವ ಮೂಲಕ ಪರಿಸರ ಪ್ರೇಮಿಯಾಗಿದ್ದು, ಸುಂದರ ಪರಿಸರ ಪ್ರಜ್ಞೆಯನ್ನು ಯುವ ಪೀಳಿಗೆಗೆ ತಿಮ್ಮಕ್ಕ ಬಿತ್ತುತ್ತಿದ್ದಾಳೆ.
ಅಂತಹ ತಿಮ್ಮಕ್ಕನ ಹಾದಿಯಲ್ಲಿ ನಾವು ನಡೆಯೋಣ. ಪ್ರಕೃತಿ ಮಾತೆಯನ್ನು ಉಳಿಸೋಣ. ಸ್ನೇಹ ಸಂಗಮದ ಹೆಸರಿನಲ್ಲಿ ಪ್ರಕೃತಿ ಮಾತೆಯ ನಿಜವಾದ ಸೇವೆಗೆ ಸದಾ ಕಂಕಣಬದ್ಧರಾಗೋಣ ಎಂದು ತಮ್ಮ ಮನದಾಳದ ಭಾವನೆಯನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಟಿ.ಸಿ. ನಾರಾಯಣಸ್ವಾಮಿ, ಕರುಣಾರ್ಜುನ, ಕೆ.ಎಸ್. ಹರೀಶ್, ಜಿತೇಂದ್ರ ಪಟೇಲ್, ಎಂ.ಎಂ. ನಟರಾಜು, ಟಿ.ವಿ. ವೆಂಕಟೇಶ ಅಯ್ಯಂಗಾರ್, ನಿಜಗುಣ ಶಿವಯೋಗಿ, ಟಿ.ಸಿ. ರಮೇಶ್, ಪದ್ಮನಾಭ, ಟಿ.ವಿ. ಚಂದ್ರಶೇಖರ್, ಶ್ರೀನಿವಾಸ್, ಅರುಂಧತಿ, ನಂದ, ಪೂರ್ಣಿಮಾ, ನಾಗರತ್ನ ಇತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.