ನಿರ್ವಹಣೆ ಇಲ್ಲದ ಟ್ರಾನ್ಸ್ಫಾರ್ಮರ್ ಅಪಾಯಕಾರಿ
ರಾಮನಗರ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಟ್ರಾನ್ಸ್ಫಾರ್ಮರ್ಗಳ ನಿರ್ವಹಣೆ ಇಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿವೆ ಎಂದು ರಾಜ್ಯ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಕಪುರ ತಾಲೂಕಿನ ಕುರುಬರಹಳ್ಳಿಯಲ್ಲಿ ಅಕ್ಕಪಕ್ಕ ಸ್ಥಾಪಿಸಿರುವ ಎರಡು ಟ್ರಾನ್ಸ್ಫಾರ್ಮರ್ಗಳ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಇದರಿಂದ ರು. 40 ಸಾವಿರ ಮೌಲ್ಯದ ಸೀಮೆಹಸು ವಿದ್ಯುತ್ಶಾಕ್ಗೆ ಬಲಿಯಾಗಿದೆ. ಇಷ್ಟಾಗಿಯೂ ಬೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಟ್ರಾನ್ಸ್ಫಾರ್ಮರ್ಗಳ ಸುತ್ತ ಮುನ್ನೆಚ್ಚರಿಕೆ ಕ್ರಮವಾಗಿ ತಂತಿಬೇಲಿ ಅಳವಡಿಸಬೇಕೆಂಬ ನಿಯಮ ಜಾರಿಯಲ್ಲಿದ್ದರೂ ಇದನ್ನು ಅಳವಡಿಸಿಕೊಂಡಿಲ್ಲ. ಶಿಥಿಲಗೊಂಡ ಟಿಸಿಗಳು ಜನತೆಗೆ ಸಮಸ್ಯಾತ್ಮಕವಾಗಿ ಪರಿಣಮಿಸಿವೆ. ಅಪಾಯಕಾರಿ ಟ್ರಾನ್ಸ್ಫಾರ್ಮರ್ಗಳನ್ನು ಸ್ಥಳಾಂತರಿಸಬೇಕೆಂಬ ಮನವಿಗೆ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ. ಟ್ರಾನ್ಸ್ಫಾರ್ಮರ್ಗಳನ್ನು ಎರಡು ಕಂಬಗಳ ಸಹಾಯದಿಂದ ನಿಲ್ಲಿಸಿರುವುದರಿಂದ ಗಾಳಿ ಮಳೆಗೆ ಅಲುಗಾಡುವುದು ಸಾಮಾನ್ಯವಾಗಿದೆ.