ಮುರಿದು ಬಿದ್ದ ಮರ: ಒಬ್ಬರ ಸಾವು
ಕ.ಪ್ರ.ವಾರ್ತೆ ಸೂಲಿಬೆಲೆ ಜು.14
ಇಲ್ಲಿನ ಸಂತೆ ಮೈದಾನದಲ್ಲಿ ಭಾನುವಾರ ರಾತ್ರಿ 8 ಗಂಟೆ ವೇಳೆಯಲ್ಲಿ ಸೇರಿದ್ದ ಜನರ ಮೇಲೆ 100 ಕ್ಕೂ ಹೆಚ್ಚು ವರ್ಷ ವಯಸ್ಸಿನ ಮರವೊಂದು ಉರುಳಿ ಬಿದ್ದ ಪರಿಣಾಮ ಒಬ್ಬರ ಸಾವನ್ನಪ್ಪಿದ್ದು, 50ಕ್ಕೂ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏನಾಯಿತು: ಸೂಲಿಬೆಲೆ ಪಟ್ಟಣದಲ್ಲಿ ಪ್ರತಿಭಾನುವಾರ ಸಂತೆ ಸೇರುತ್ತದೆ. ಗ್ರಾಪಂ ಕಟ್ಟಡಕ್ಕೆ ಹೊಂದಿಕೊಂಡಿರುವಂತೆ ಇರುವ ಸಂತೆ ಸೇರುವ ಸ್ಥಳದಲ್ಲಿ ಪುರಾತನ ಕಾಲದ ಮರಗಳಿವೆ. ಇವುಗಳ ಕೆಳಗೆ
ತರಕಾರಿ ಅಂಗಡಿಗಳನ್ನಿಟ್ಟು ಸಂತೆಗೆ ಬರುವ ಜನರಿಗೆ ಮಾರಾಟ ಮಾಡುವ ಸಂಪ್ರಾದಾಯ ಕೆಲ ದಶಕಗಳಿಂದ ಬೆಳೆದು ಬಂದಿದೆ. ಎಂದಿನಂತೆ ಭಾನುವಾರ ಸಂಜೆ ಸಂತೆ ಮುಗಿಸಿ ಇನ್ನೇನು ಮನೆಗಳತ್ತ ಹೋಗಬೇಕೆನ್ನುವಷ್ಟರಲ್ಲಿ ಪುರಾತನ ಕಾಲದ ಮರ ಜನರ ಮೇಲೆ ಏಕಾಏಕೀ ಉರುಳಿ ಬಿದ್ದಿದ್ದೆ. ಇದನ್ನು ಕಂಡ ಜನ ಚಲ್ಲಾಪಿಲ್ಲಿಯಾಗಿ ಓಡುವಷ್ಟರಲ್ಲಿ ಮರದ ಕೆಳಗೆ ಅಂಗಡಿ ಇಟ್ಟುಕೊಂಡಿದ್ದ ಲಕ್ಷಮ್ಮ (40)ಸಾವನ್ನಪ್ಪಿದ್ದಾರೆ. ಈಕೆಯ ಮಗ ನರಸಿಂಹಮೂರ್ತಿ (28) ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ.
50ಕ್ಕೂ ಹೆಚ್ಚು ಮಂದಿ ಪಾರು: ಉರುಳಿ ಬಿದ್ದ ಮರ ಪುರಾತನ ಕಾಲದ್ದಾಗಿದ್ದು, ತುಂಬಾ ವಿಶಾಲವಾದ ದೊಡ್ಡ ಗಾತ್ರದ ಕೊಂಬೆಗಳನ್ನು ಹೊಂದಿತ್ತು. ಮರದ ಪಕ್ಕದಲ್ಲಿಯೇ ಗ್ರಾಪಂ ಅಂಗಡಿಗಳನ್ನು ಕಟ್ಟಿದ್ದು, ಕೊಂಬೆಗಳು ಇದರ ಮೇಲೆ ಹೋಗುತ್ತವೆ ಎಂಬ ಕಾರಣ ಮರದ ಒಂದುಭಾಗವನ್ನು ಕಡಿಯಲಾಗಿತ್ತು. ಇನ್ನೊಂದು ಭಾಗದಲ್ಲಿ ಮರದ ಸಂಪೂರ್ಣ ಭಾರವಿತ್ತು. ಬುಡ ಶಿಥಿಲಗೊಂಡು ಮರ ಉರುಳಿ ಬಿದ್ದಿದೆ. ಬುಡದಲ್ಲಿಯೇ ಡಿಸಿಎಂ ಟೋಯೋಟಾ ಗಾಡಿಯೊಂದು ನಿಲ್ಲಿಸಿದ್ದ ಪರಿಣಾಮ ಮರದ ಸಂಪೂರ್ಣ ಭಾರ ಗಾಡಿಯ ಮೇಲೆ ಬಿದಿದ್ದೆ.
ಇದರಿಂದ ಪ್ರಾಣ ನಷ್ಟ ಕಡಿಮೆಯಾಗಿದೆ. ಹಾಗೊಂದು ವೇಳೆ ಟೊಯೋಟಾ ಗಾಡಿ ಅಲ್ಲಿ ಇಲ್ಲಿದಿದ್ದರೆ ಸಾವಿನ ಪ್ರಮಾಣ ಹೆಚ್ಚಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದರು.