ಅಪರಾಧ ಸುದ್ದಿ
ಬಾವಿಗೆ ಬಿದ್ದು ನವವಿವಾಹಿತೆ ಆತ್ಮಹತ್ಯೆ
ಕ.ಪ್ರ.ವಾರ್ತೆ ಕೆಜಿಎಫ್ ಜು. 15
ಬಾವಿಗೆ ಬಿದ್ದು ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯ ಗ್ರಾಮದಲ್ಲಿ ನಡೆದಿದೆ. ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಪಾಪುರ ಗ್ರಾಮದ ಚೊಕ್ರಬಂಡೆಹಳ್ಳಿ ಗ್ರಾಮದ ನಿವಾಸಿ ವೆಂಕಟೇಶಪ್ಪ ಎಂಬುವರ ಮಗಳಾದ ಮಂಗಮ್ಮ(20) ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಂಗಮ್ಮಳನ್ನು ಕಳೆದ 2 ತಿಂಗಳ ಹಿಂದೆ ತಮಿಳುನಾಡಿನ ಪಚ್ಚೂರು ನಿವಾಸಿ ಚಂದ್ರ(38) ಎಂಬುವರೊಂದಿಗೆ ಮದುವೆ ಮಾಡಿಸಲಾಗಿತ್ತು ಎನ್ನಲಾಗಿದೆ. ಭಾನುವಾರ ಮಂಗಮ್ಮ ತಮ್ಮ ಗಂಡ ಚಂದ್ರನೊಂದಿಗೆ ತವರು ಮನೆಗೆ ಬಂದಿದ್ದಳು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ 7.30ಕ್ಕೆ ತಮ್ಮ ಅಣ್ಣನ ಮಗಳೊಂದಿಗೆ ಬಹಿರ್ದೆಸೆಗೆಂದು ಹೋಗಿದ್ದಾಗ ಮಂಗಮ್ಮ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಆಂಡ್ರಸನ್‌ಪೇಟೆ ಪೊಲೀಸರು ಮೃತ ದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಮಂಗಮ್ಮ ಕಾಲು ಜಾರಿ ಬಾವಿಗೆ ಬಿದ್ದಳಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಆಂಡ್ರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಮಲಿನಲ್ಲಿ ತಮ್ಮನ ಮನೆಯಲ್ಲಿ ದಾಂದಲೆ
ಚಿಂತಾಮಣಿ: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಮ್ಮನ ಮನೆಗೆ ನುಗ್ಗಿದ ಅಣ್ಣ ಸಾವಿರಾರು ರು. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ನಾಶಪಡಿಸಿದ ಘಟನೆ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ತಮ್ಮನ ಮಕ್ಕಳು ಕುಪಿತಗೊಂಡು ಕುಡುಕನ ಮೇಲೆ ಹಲ್ಲೆ ಮಾಡಿದ ಪರಿಣಾಮ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮದ ನಾರಾಯಣಸ್ವಾಮಿ ಎಂಬಾತನು ಕಂಠ ಪೂರ್ತಿ ಕುಡಿದ ಅಮಲಿನಲ್ಲಿ ತಮ್ಮನಾದ ರಮೇಶರೆಡ್ಡಿ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಮನೆಗೆ ನುಗ್ಗಿ ಟಿವಿ ಸೇರಿದಂತೆ ಸುಮಾರು 50 ಸಾವಿರ ಬೆಲೆಯ ವಸ್ತುಗಳನ್ನು ನಾಶಪಡಿಸಿದ ಕಾರಣಕ್ಕಾಗಿ ರಮೇಶರೆಡ್ಡಿ ಮಕ್ಕಳಾದ ಪ್ರದೀಪ್ ಮತ್ತು ಪ್ರಶಾಂತ್ ತನ್ನ ದೊಡ್ಡಪ್ಪನ ವರ್ತನೆಯಿಂದ ಕೆಂಡಾಮಂಡಲವಾಗಿ ಹಲ್ಲೆ ಮಾಡಿದ ಪರಿಣಾಮ ನಾರಾಯಣಸ್ವಾಮಿ ಗಂಭೀರ ಗಾಯಗಳಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಬಾಗಿಲು ಮುರಿದು ಚಿನ್ನಾಭರಣ ಕಳವು
ಕೆಜಿಎಫ್: ಮನೆ ಹಿಂಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವರ್ಣನಗರದ 3ನೇ ಅಡ್ಡ ರಸ್ತೆಯ ನಿವಾಸಿ ಸುರೇಶ್‌ರೆಡ್ಡಿ ಎಂಬುವರು ಗೋಮಾಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಶಾಲೆಯಿಂದ ಬಂದ ನಂತರ ತಮ್ಮ ಪತ್ನಿ ಮಗುವೊಂದಿಗೆ ಸ್ವಂತ ಊರಾದ ದೊಡ್ಡಬಲುವಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಮಾರನೇ ದಿನ ಭಾನುವಾರ ಸಂಜೆ ಮನೆಗೆ ಹಿಂತಿರುಗಿದ್ದು ಮನೆಯ ಮುಂಬಾಗೀಲನ್ನು ತೆರೆಯಲು ಆಗದ ಕಾರಣ ಬೀಗ ರಿಪೇರಿ ಮಾಡುವವರನ್ನು ಕರೆಸಿ ಬಾಗಿಲನ್ನು ತೆಗೆದು ಮನೆಯೊಳಗೆ ಹೋಗಿ ನೋಡಿದಾಗ ಮನೆಯಲ್ಲಿದ್ದ ವಸ್ತುಗಳು, ಮತ್ತು ಬೀರುವಿನ ಲಾಕರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಅಡುಗೆ ಕೊಣೆ ಬಾಗೀಲು ತೆರೆದಿತ್ತು. ಮನೆ ಹಿಂಬಾಗಿಲನ್ನು ಮುರಿದು ಅಡುಗೆ ಕೊಣೆಯ ಮೂಲಕ ಬೆಡ್ ರೂಂ. ಒಳಗೆ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ 100 ಗ್ರಾಂ. ಚಿನ್ನದ ಒಡವೆಗಳು, ಅರ್ಧ ಕೆಜಿ ಬೆಳ್ಳಿ ಆಭರಣಗಳು, 20 ಸಾವಿರ ನಗದು ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ರಕ್ಷಣಾಧಿಕಾರಿ ಡಾ. ರೋಹಿಣಿಕಟೋಚ್ ಸಫೆಟ್, ವೃತ್ತ ನಿರೀಕ್ಷಕ ಟಿ.ಸಿ. ವೆಂಕಟೇಶ್, ಭೋಟಿ ನೀಡಿದ್ದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲಿಸಿದರು.