ಕಾರ್ಖಾನೆಗಳ ತ್ಯಾಜ್ಯ ಹೆದ್ದಾರಿ ಬದಿಯೇ ವಿಲೇವಾರಿ
ಕ.ಪ್ರ.ವಾರ್ತೆ ರಾಮನಗರ ಜು. 15
ಬೆಂಗಳೂರು-ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯಕ್ಕೆ ಕೊನೆಯೇ ಇಲ್ಲ. ಬಿಬಿಎಂಪಿ, ರಾಮನಗರ ನಗರಸಭೆ ವ್ಯಾಪ್ತಿಯ ಕಸ ಮಾತ್ರವಲ್ಲದೆ ಕಾರ್ಖಾನೆಗಳ ತ್ಯಾಜ್ಯ ವಿಲೇವಾರಿಗೂ ಹೆದ್ದಾರಿ ಬದಿಯೇ ತಾಣವಾಗಿದೆ!
ಬಿಡದಿಯಿಂದ ರಾಮನಗರ ದಾಟಿ ಜಾನಪದಲೋಕಕ್ಕೆ ಬರುವವರೆಗೂ ಹೆದ್ದಾರಿ ಇಕ್ಕೆಲಗಳಲ್ಲಿ ಕಸದ ರಾಶಿಯೇ ರಾರಾಜಿಸುತ್ತಿರುತ್ತದೆ. ರಾಮನಗರ ಮತ್ತು ಚನ್ನಪಟ್ಟಣ ನಗರಗಳ ಕಸ ವಿಲೇವಾರಿಗೆ ಕಣ್ವ ಬಳಿ 45 ಎಕರೆ ಜಾಗ ನೀಡಿದರೂ, ಇಲ್ಲಿಯೇ ಕದ್ದುಮುಚ್ಚಿ ಕಸ ಮತ್ತು ಕಾರ್ಖಾನೆಗಳ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯ ಕಸ ವಿಲೇವಾರಿಗೆ ಬಿಡದಿ ಸಮೀಪದ ಕರೇನಹಳ್ಳಿಯೂ ಸೇರಿದಂತೆ ಬೆಂಗಳೂರು ಸುತ್ತಮುತ್ತ ಜನರಿಂದ ತೀವ್ರ ವಿರೋಧ ವ್ಯಕ್ತವಾದಾಗ ಗುತ್ತಿಗೆದಾರರು ಹೆದ್ದಾರಿ ಬದಿಯಲ್ಲಿಯೇ ತ್ಯಾಜ್ಯ ತಂದು ಹಾಕುತ್ತಿರುವುದಲ್ಲದೆ, ಅದಕ್ಕೆ ಬೆಂಕಿ ಹಚ್ಚಿ ಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
ಕಾರ್ಖಾನೆಗಳ ಕುಯುಕ್ತಿ: ಬಿಡದಿಯಿಂದ ರಾಮನಗರದ ಮಾಯಗಾನಹಳ್ಳಿವರೆಗೆ ಸುಟ್ಟು ಬೂದಿಯಾದ ತ್ಯಾಜ್ಯದ ರಾಶಿಗಳು ಹೆಜ್ಜೆ ಹೆಜ್ಜೆಗೂ ಇವೆ. ಸಾಕಷ್ಟು ಕಡೆ ಹತ್ತಿ, ಬಲ್ಬ್ ಮತ್ತು ಚೂರಾದ ಗ್ಲಾಸ್ ಸಹಿತ ನಾಶಪಡಿಸಲಾಗದ ಕಾರ್ಖಾನೆಗಳ ತ್ಯಾಜ್ಯದ ಗುಡ್ಡೆಗಳೂ ಇವೆ. ಇನ್ನು ರಾಮನಗರ ಮತ್ತು ಜಾನಪದಲೋಕದ ನಡುವೆ ಕೋಳಿ ರೆಕ್ಕೆ, ಪುಕ್ಕ ಹಾಗೂ ಕಸಾಯಿಖಾನೆಯಿಂದ ವಿಲೇವಾರಿ ಆಗಿರುವ ಮೂಳೆ, ಕೊಳೆತ ಮಾಂಸದ ತ್ಯಾಜ್ಯವೇ ತಾಂಡವಾಡುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹೆದ್ದಾರಿಯುದ್ದಕ್ಕೂ ತಲೆ ಎತ್ತಿರುವ ಹೊಟೇಲ್, ಅಂಗಡಿ, ಮುಂಗಟ್ಟು ಮತ್ತು ವಾಣಿಜ್ಯ ಕೇಂದ್ರಗಳಿಂದ ಕಾಲುವೆ, ಕೆರೆ, ಕಟ್ಟೆ ಮತ್ತು ಸರ್ಕಾರಿ ಜಾಗ ಒತ್ತುವರಿಯಾಗಿದೆ. ಬಹುಪಾಲು ಹೊಟೇಲ್ ಮತ್ತು ವಾಣಿಜ್ಯ ಘಟಕಗಳು ಪರವಾನಗಿ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿವೆ.
ಉಳಿದಿಲ್ಲ ನೆಮ್ಮದಿ: 'ಬಿಬಿಎಂಪಿ ಕಸಕ್ಕೆ ರಾಮನಗರವನ್ನು ತೊಟ್ಟಿಯನ್ನಾಗಿಸುವುದಿಲ್ಲ' ಎಂಬ ಸುದ್ದಿಯಿಂದ ನಿಟ್ಟುಸಿರು ಬಿಟ್ಟಿದ್ದ ಈ ಭಾಗದ ಜನತೆಗೆ ಇದೀಗ ನಡೆಯುತ್ತಿರುವ ಕಸ, ತ್ಯಾಜ್ಯ ವಿಲೇವಾರಿಯಿಂದ ನೆಮ್ಮದಿ ಇಲ್ಲವಾಗಿದೆ. ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೈಗಾರಿಕಾ ಇಲಾಖೆ ಅಧಿಕಾರಿಗಳು ಈ ಜಿಲ್ಲೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪರಿಸರ ಮಾಲಿನ್ಯ ಮತ್ತು ನಿಯಮ ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಇಲ್ಲಿವರೆಗೆ ಮಾಲಿನ್ಯ ವಿಷಯವಾಗಿ ಶಿಕ್ಷೆ ವಿಧಿಸಿದ ನಿದರ್ಶನವೂ ಇಲ್ಲ.
ಕಾರ್ಯದರ್ಶಿ ಗರಂ: ಈಚೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಸವರಾಜು ಅವರು ರಾಮನಗರ ಜಿಲ್ಲೆಯ ಹೆದ್ದಾರಿ ಇಕ್ಕೆಲ ಮತ್ತು ವಿವಿಧೆಡೆ ಆಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ಅಧಿಕಾರಿಗಳಿಂದ ವಿವರಣೆ ಕೇಳಿದ್ದರು. ನಿಯಮ ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಲು ತಾಕೀತು ಮಾಡಿದ್ದರು. ಅವರ ಮಾತಿಗೆ ಧ್ವನಿಗೂಡಿಸಿದ್ದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಕೂಡ ಸ್ಥಳ ಪರಿಶೀಲಿಸಿ, ಯಾವ್ಯಾವ ಕಾರ್ಖಾನೆಯಿಂದ ಮಾಲಿನ್ಯ ಉಂಟಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಕಸ, ತ್ಯಾಜ್ಯ ವಿಲೇವಾರಿ ರುಜುವಾತು ನಂತರ ಸಂಬಂಧಿಸಿದ ಘಟಕದ ಪರವಾನಗಿ ರದ್ದುಪಡಿಸಬೇಕೆಂದು ಸೂಚಿಸಿದ್ದಾರೆ. ಆದರೂ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಮತ್ತೀಕೆರೆ ಜಯರಾಮ್