ಗಗನದಲ್ಲಿ ಬಾನಾಡಿಗಳಾದ ನೂರಾರು ಗಾಳಿಪಟ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು. 15
ಬಾನಂಗಳಕ್ಕೆ ಲಗ್ಗೆ ಇಟ್ಟ ಗಾಳಿಪಟಗಳು ಎತ್ತರೆತ್ತರಕ್ಕೆ ಹಾರುವ ಮೂಲಕ ಗಗನಚುಂಬಿಯಾಗಿ ಮೇಲೇರಲು ನಡೆಸಿದ ಪೈಪೋಟಿ ನೋಡುಗರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಬಣ್ಣ ಬಣ್ಣದ ಬಾನಾಡಿಗಳಂತೆ ಸ್ಪರ್ಧಾ ಅಖಾಡಕ್ಕಿಳಿದಿದ್ದ ನೂರಾರು ಗಾಳಿಪಟಗಳು, ತರಾವರಿ ಸಂದೇಶಗಳನ್ನು ಹೊತ್ತು ಮೆರೆದದ್ದು ವಿಶೇಷ. ಭಾನುವಾರ ಇಲ್ಲಿನ ಚಿಕ್ಕತುಮಕೂರು ರಸ್ತೆಯ ಗುಂಡಪ್ಪನವರ ಬಯಲು ಮೈದಾನದಲ್ಲಿ ಚಿತ್ತಾರದ ಜಗತ್ತು ಸೃಷ್ಟಿಯಾಗಿತ್ತು. ನೂರಾರು ಜನ ಸೇರಿ ಜಾತ್ರೆಯ ಸಂಭ್ರಮ ಮನೆಮಾಡಿತ್ತು.
ಇಲ್ಲಿನ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ನೇತೃತ್ವದಲ್ಲಿ ನಡೆದ 6ನೇ ವರ್ಷದ ಗಾಳಿಪಟ ಹಾರಿಸುವ ಸ್ಪರ್ಧೆಗೆ ಮಂಡ್ಯ, ಪಾಂಡವಪುರ, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಸ್ಪರ್ಧಿಗಳು ಬಂದು ಭಾಗವಹಿಸುವುದರೊಂದಿಗೆ ಸ್ಪರ್ಧೆ ಹೆಚ್ಚಿನ ಮಹತ್ವ ಗಳಿಸಿತ್ತು.
ತರಾವರಿ ಸಂದೇಶ: ಸ್ಪರ್ಧೆಯಲ್ಲಿ ರಕ್ತದಾನ ಮಹಾದಾನ, ಜೀವಜಲ ನೀರು, ಡ್ರಾಗನ್, ಎಚ್ಐವಿ ಜಾಗೃತಿ ಸಂದೇಶ, ಗೋವಿಂದ, ಸೂರ್ಯಕಾಂತಿ, ನವಿಲು, ಎಚ್2ಓ, ಗರುಡ, ಗಣೇಶ, ಕರಿನಾಗ, ಎಲೆಗಣಪ, ಕಾಡುದೇವಿ, ಗೂಳಿ, ಯಕ್ಷಗಾನ, ರಾಷ್ಟ್ರೀಯ ಚಿಹ್ನೆ, ರುಪಾಯಿ, ತ್ರಿಶೂಲ, ನಾಗರಹಾವು, ಕನ್ನಡದ ಕೋಟ್ಯಧಿಪತಿ ಸೇರಿದಂತೆ ಅನೇಕ ಹತ್ತಾರು ಬಗೆಯ ಗಾಳಿಪಟಗಳು ಗಮನ ಸೆಳೆದವು. ರಾಖಿಪಟ, ಪುಷ್ಪಕವಿಮಾನ ಪಟ, ಹಡಗು ಪಟಗಳು ಕೌಶಲದಿಂದ ಗಮನ ಸಳೆದವು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಸಂಸ್ಕೃತಿಯೊಂದಿಗೆ ಗಾಳಿಪಟಗಳ ಸಂವೇದನೆ ಇದೆ. ಇಡೀ ರಾಜ್ಯಕ್ಕೆ ಮಾದರಿ ಎನಿಸುವ ಗಾಳಿಪಟಗಳನ್ನು ತಯಾರಿಸುವ ತಂತ್ರಜ್ಞರು ದೊಡ್ಡಬಳ್ಳಾಪುರದಲ್ಲಿದ್ದಾರೆ. ಇಂದಿಗೂ ಯಾವುದೇ ಸ್ಪರ್ದೆಗಳಲ್ಲೂ ಯಶಸ್ವಿಯಾಗಿ ಬಹುಮಾನಗಳನ್ನು ಪಡೆಯುವ ಪ್ರತಿಭಾವಂತಿಕೆ ಇಲ್ಲಿನ ಯುವ ಗಾಳಿಪಟ ಅಭಿಮಾನಿಗಳಲ್ಲಿದೆ ಎಂದರು.
ಯುವಕರು ಈ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ಜಾನಪದ ಕಲೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಅವು ಉಳಿಯುತ್ತವೆ ಎಂದರು. ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜೇತರು: ಪುರುಷರ ವಿಭಾಗದಲ್ಲಿ ಎನ್.ನವೀನ್(ಪರ್ವತ ಹೊತ್ತ ಆಂಜನೇಯ)-ಪ್ರಥಮ, ಮಣಿಕಂಠ(ಬಣ್ಣದ ಬುಗರಿ ಪಟ)-ದ್ವಿತೀಯ, ನವೀನ್(ಅನ್ನಭಾಗ್ಯ ಪಟ)-ತೃತೀಯ, ಕೆ.ಉದಯಕುಮಾರ್(ಆಂಜನೇಯಪಟ), ಕೆ.ಹರೀಶ್(ಪರಿಸರ ಉಳಿಸಿ), ಸಿ.ಆರ್.ಚಂದನ್(ನಾಮಪಟ), ಶೇಷಾದ್ರಿ(ತ್ರಿಶೂಲ ಪಟ), ಪ್ರವೀಣ್(ಓಂ ಪಟ), ಪವನ್(ಗಣೇಶಪಟ), ಭಾಸ್ಕರ್(ನವಚೇತನ ಪಟ), ಎಂ.ಅರುಣ್(ಕೃಷ್ಣ ಪಟ) ಸಮಾಧಾನಕರ ಬಹುಮಾನಗಳನ್ನು ಪಡೆದರು.
ರಾಜ(ಮಗ್ಗ ಪಟ), ಟಿ.ಡಿ.ಅನಿಲ್ಕುಮಾರ್(ಆಂಜನೇಯಪಟ) ವಿಶೇಷ ಬಹುಮಾನಗಳನ್ನು ಪಡೆದರು. ಮಹಿಳೆಯರ ವಿಭಾಗ: ಪುಷ್ಪಲತ(ಗಂಡಭೇರುಂಡ)-ಪ್ರಥಮ, ನಾಗಲಕ್ಷ್ಮಿ(ಗಣಪತಿ ಪಟ)-ದ್ವಿತೀಯ, ಕೆ.ಸ್ನೇಹ(ಡೆಲ್ಟಾ ಪಟ)-ತೃತೀಯ, ಎಲ್.ಎಸ್.ಹೇಮ(ಏರೋಪ್ಲೇನ್ ಪಟ), ಭವ್ಯ(ಆಪಲ್ ಪಟ), ಉಷಾ(ನೇತ್ರದಾನ ಪಟ), ಕೃಷ್ಣವೇಣಿ(ಕಿಸ್ಮಿ ಪಟ), ನಿರ್ಮಲ(ಕೊಂಗಾಡಿಯಪ್ಪ ಪಟ) ಬಹುಮಾನಗಳನ್ನು ಪಡೆದರು.
ಸಂಘದ ಅಧ್ಯಕ್ಷ ಎಸ್.ಸಿ.ಜಗದೀಶಪ್ಪ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಿಮ್ಸ್ ಮಾಜಿ ಅಧ್ಯಕ್ಷ ಬಿ.ಮುನೇಗೌಡ, ನಗರಸಭಾ ಸದಸ್ಯ ತ.ನ.ಪ್ರಭುದೇವ್, ವಾಣಿಜ್ಯೋದ್ಯಮಿ ಎಚ್.ಪಿ.ಶಂಕರ್, ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಕಾಂಗ್ರೆಸ್ ಮುಖಂಡ ತಿ.ರಂಗರಾಜು, ನಗರಸಭಾ ಸದಸ್ಯ ಕೆ.ಜಿ.ರಘುರಾಂ, ಲೋಕೇಶ್ ಬಾಬು, ಮಾಜಿ ನಗರಸಭಾ ಸದಸ್ಯ ಎಸ್.ದಯಾನಂದ್ ಸೇರಿದಂತೆ ಕಲಾ ಸಂಘದ ಕಾರ್ಯಕರ್ತರು ಹಾಜರಿದ್ದರು.