ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇಶದಲ್ಲಿರುವ ಕಾನೂನುಗಳ ಕುರಿತು ಅರಿವು ಅಗತ್ಯ

Rashmi Kasaragodu
Updated On : 16 Jul 2013, 1:28 am

ಕ.ಪ್ರ.ವಾರ್ತೆ   ರಾಮನಗರ   ಜು. 15
ಪ್ರತಿಯೊಬ್ಬರೂ ದೇಶದಲ್ಲಿರುವ ಕಾನೂನುಗಳ ಬಗ್ಗೆ ಅರಿವು ಪಡೆದುಕೊಳ್ಳುವುದು ಮೂಲಭೂತ ಕರ್ತವ್ಯಗಳಲ್ಲೊಂದಾಗಿದೆ ಎಂದು ಅಪರ ಸಿವಿಲ್ ನ್ಯಾಯಾಧೀಶ ಆನಂದ್ ಹೂಗಾಡೆ ತಿಳಿಸಿದರು.
ತಾಲೂಕಿನ ಹರೀಸಂದ್ರ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ತಾಲೂಕು ಪಂಚಾಯಿತಿಯಿಂದ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಅರಿವಿದ್ದರೆ ವ್ಯಾಜ್ಯಗಳು ಕಡಿಮೆಯಾಗಿ ನ್ಯಾಯಾಲಯಗಳಿಗೆ ಅಲೆಯುವುದು ತಪ್ಪುತ್ತದೆ. ನ್ಯಾಯಾಲಯಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ತ್ವರಿತವಾಗಿ ನ್ಯಾಯದಾನ ಸಾಧ್ಯವಾಗುತ್ತದೆ. ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ವೈಯಕ್ತಿಕವಾಗಿ ಆರ್ಥಿಕಾಭಿವೃದ್ಧಿ ಆಗುವ ಜತೆಗೆ ದೇಶದ ಅಭಿವೃದ್ಧಿಯೂ ಆಗುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ವರದಕ್ಷಿಣೆ ಆಸೆಗಾಗಿ ಪತಿ ತನ್ನ ಪತ್ನಿಯನ್ನೇ ಅಮಾನುಷವಾಗಿ ಕೊಲೆ ಮಾಡುತ್ತಿರುವುದು ವಿಷಾದನೀಯ. ಈ ಅನಿಷ್‌ಠ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಮಹಿಳೆಯರು ವರದಕ್ಷಿಣೆ ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದು ವಕೀಲ ಶಿವಣ್ಣಗೌಡ ತಿಳಿಸಿದರು.
ಧಾವೆ ಹೂಡಬಹುದು: ಮದುವೆಗೆ ಮುನ್ನ, ಮದುವೆಯ ಸಂದರ್ಭದಲ್ಲಿ ಹಾಗೂ ಮದುವೆ ನಂತರ ಪತಿ ತನ್ನ ಪತ್ನಿ ಅಥವಾ ಪತ್ನಿಯ ಪೋಷಕರಲ್ಲಿ ಯಾವುದೇ ತರಹದ ಬೇಡಿಕೆ ಇಟ್ಟರೆ ಅದು ವರದಕ್ಷಿಣೆಯಾಗುತ್ತದೆ. ಇದರ ವಿರುದ್ಧ ಪತ್ನಿ ನ್ಯಾಯಾಲಯದಲ್ಲಿ ಧಾವೆ ಹೂಡಬಹುದು ಎಂದರು.  ವರದಕ್ಷಿಣೆಗೆ ಬೇಡಿಕೆ ಸಲ್ಲಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಹಾಗೆಯೇ ವರದಕ್ಷಿಣೆ ಕೊಡುವುದೂ ಕೂಡ ಒಂದು ಅಪರಾಧವಾಗಿದೆ. ಇದಕ್ಕೆ 1 ರಿಂದ 5 ವರ್ಷ ಕಾಲ ಶಿಕ್ಷೆಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು. ಸಮಾಜದಲ್ಲಿ ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಶೋಷಣೆ ಅನುಭವಿಸುತ್ತಿರುವುದನ್ನು ಮನಗಂಡ ಸರ್ಕಾರ 2005ರಲ್ಲಿ ಆಸ್ತಿ ಹಕ್ಕಿಗೆ ತಿದ್ದುಪಡಿ ತಂದಿತು. ಇದರ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರೂ ಕೂಡ ಸಮಪಾಲು ಪಡೆಯಬಹುದು ಎಂದು ವಕೀಲ ಲೋಕೇಶ್ ತಿಳಿಸಿದರು.
ಹರೀಸಂದ್ರ ಗ್ರಾ.ಪಂ. ಅಧ್ಯಕ್ಷ ಚಂದ್ರೇಗೌಡ, ಸದಸ್ಯೆ ಶೋಭಾ, ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ಶಾಂತಪ್ಪ, ಕಾರ್ಯದರ್ಶಿ ಎಂ.ಜಿ.ಮಹೇಶ್, ತಾ.ಪಂ. ಇಒ ಕೆ.ಸಿ.ನಾರಾಯಣಸ್ವಾಮಿ, ಮಹಿಳಾ ಸಂರಕ್ಷಣಾಧಿಕಾರಿ ನಾಗಲಾಂಬಿಕೆ, ವಕೀಲರಾದ ಪೂರ್ಣಿಮಾ, ಟಿ.ಎಂ.ಚಂದ್ರಶೇಖರ್, ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement